78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Thursday, December 8, 2011

ಇವನಮ್ಮವ..ಇವನಮ್ಮವ..


ಗಂಗಾವತಿ: ಇಲ್ಲಿ ಮನೆಮನೆಯಲ್ಲೂ ಸಡಗರ. ನಗರದ 350 ಮನೆಗಳಲ್ಲಂತೂ ಬೀಗರನ್ನು ಸ್ವಾಗತಿಸುವ ಸಂಭ್ರಮ. ಒಂದೆರಡು ವಾರಗಳಿಂದಲೇ ಹಾಸಿಗೆ ಹೊದಿಕೆಗಳನ್ನು ಒಗೆದು, ಮಡಿ ಮಾಡಿ ಇಟ್ಟಿದ್ದಾರೆ. ತಮ್ಮ ಮನೆಯಲ್ಲಿ ಬಂದಿಳಿಯುವ ಅತಿಥಿ- ಅಭ್ಯಾಗತರ ಸತ್ಕಾರಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ.


ಆದರೆ ಎಲ್ಲರಿಗೂ ಒಂದು ಆತಂಕ. ಬರುವವರು ಯಾರು? ಒಮ್ಮೆಯೂ ನೋಡಿಲ್ಲ. ನಮ್ಮ ಮನೆ ಸಾಕಾಗಬಹುದೆ? ಅವರು ಹೊಂದಿಕೊಳ್ಳಬಲ್ಲರೆ? ಇಂಥವೇ ಹಲವು ಪ್ರಶ್ನೆಗಳು ಇವರೆಲ್ಲರನ್ನೂ ಕಾಡಿವೆ. ಆದರೆ ಅದಕ್ಕೂ ಮೀರಿ ಅವರ ಮನದಲ್ಲಿರುವುದು ಕೇವಲ ಆದರ- ಆತಿಥ್ಯ, ಸತ್ಕಾರದ ಹಾತೊರಿಕೆ ಮಾತ್ರ. 

ಮನಸಿನ ಶ್ರೀಮಂತಿಕೆಯಲ್ಲಿ ಉಳಿದೆಲ್ಲ ಕೊರತೆ, ದೋಷಗಳು ಗೌಣವಾಗುತ್ತವೆ ಎಂಬ ವಿಶ್ವಾಸ ಇಲ್ಲಿಯ ಶಾಸಕ ಪರಣ್ಣ ಮುನವಳ್ಳಿ ಅಭಿಪ್ರಾಯವಾಗಿತ್ತು. ಅದನ್ನು ಸಹಜವೆಂಬಂತೆ ಸ್ವೀಕರಿಸಿ ಇಡೀ ನಗರದಲ್ಲಿ ಆತಿಥೇಯರ ಬಣವೇ ಸಿದ್ಧವಾಗಿದೆ. 

ಗಂಗಾವತಿಯ ಜಯನಗರ, ಸತ್ಯನಾರಾಯಣ ನಗರ, ಕುವೆಂಪು ಬಡಾವಣೆ, ಸಿದ್ಧಾಪುರ ಬಡಾವಣೆ, ಚನ್ನಬಸವೇಶ್ವರ ಬಡಾವಣೆ ಮುಂತಾದೆಡೆಗಳಲ್ಲಿ 200 ಮನೆಗಳಲ್ಲಿ 600 ಅತಿಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 

ಸಮ್ಮೇಳನದ ಮುನ್ನಾ ದಿನ `  ಇಂಥ ಕೆಲವು ಮನೆಗಳಿಗೆ ಭೇಟಿ ನೀಡಿದರೆ ಎಲ್ಲ ಮನೆಗಳಲ್ಲೂ ಹಬ್ಬದ ಸಂಭ್ರಮ. ಎಸ್‌ಬಿಎಚ್ ಬ್ಯಾಂಕ್ ಅಧಿಕಾರಿ ನಾರಾಯಣ ರಾವ್ ಅವರ ಮನೆಯಲ್ಲಿ ಕಲಾವಿದರ ತಂಡವೊಂದು ಉಳಿಯಲಿದೆ. ಕಲಾವಿದರಿಗಾಗಿಯೇ ಮನೆಯಲ್ಲಿ ಡಬ್ಬದ ತುಂಬ ಅವಲಕ್ಕಿ, ಚೂಡಾ, ಬೇಸನ್ ಲಾಡು ಮುಂತಾದವುಗಳನ್ನು ಸಿದ್ಧಪಡಿಸಿದ್ದಾರೆ. ಊರಿಂದ ದಣಿದು ಬಂದವರ ಆಸರೆಗೆ ಇರಲಿ ಎಂಬುದು ಈ ಮನೆಯ ಒಡತಿಯರಾದ ಕುಮುದಾ ಹಾಗೂ ವಿದ್ಯಾ ಅವರ ಔದಾರ್ಯವಾಗಿದೆ. 

ಇನ್ನು ಸಮ್ಮೇಳನಾಧ್ಯಕ್ಷ ಸಿಪಿಕೆ ಅವರ ಕುಟುಂಬ ಉಳಿಯಲಿರುವ ಮನೆ ರಮಾ ರಂಗರಾವ್ ದರೋಜಿ ಅವರದ್ದು. ಇವರಂತೂ ತಮ್ಮ ಮನೆಯ ಒಂದು ಭಾಗವನ್ನು ಬಾಡಿಗೆಗೆ ಬಂದರೂ ನಿರಾಕರಿಸಿ ಅತಿಥಿಗಳಿಗಾಗಿ ಸಜ್ಜುಗೊಳಿಸುತ್ತಿದ್ದಾರೆ. ಬುಧವಾರ ದಂಪತಿ ತಮ್ಮ ಮನೆಯನ್ನು ಅಣಿಗೊಳಿಸುತ್ತ, `ಮಗಳ ಮದುವೆ`ಯ ಸಂಭ್ರಮವೆನಿಸುತ್ತಿದೆ ಎಂದರು.

ಇನ್ನೊಂದು ಮನೆ ಸಿ.ಎಚ್.ಸತ್ಯನಾರಾಯಣ ಶೆಟ್ಟಿ ಅವರದ್ದು. ಅವರ ಮನೆಗೂ ಕಲಾವಿದರ ತಂಡ ಬರಲಿದೆ. ಅದಕ್ಕಾಗಿ ಮನೆಯ ಒಡತಿ ಆದಿಲಕ್ಷ್ಮಿ, ಸೊಸೆ ರಾಜಲಕ್ಷ್ಮಿ, ಮಗಳು ಭಾಗ್ಯಲಕ್ಷ್ಮಿ ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸುತ್ತಿದ್ದಾರೆ. 

ಇವರೆಲ್ಲರಿಗೂ ಒಂದೇ ಅಭಿಮಾನದ ಸಂಗತಿ. ರಾಷ್ಟ್ರ ಮಟ್ಟದ ಸಮ್ಮೇಳನವೊಂದು ತಮ್ಮೂರಿನಲ್ಲಿ ಆಗುತ್ತಿದೆ. ಆದಷ್ಟೂ ಆಹ್ವಾನಿತರು ಇಲ್ಲಿಂದ ಸಂತೃಪ್ತರಾಗಿ ಮರಳಲಿ, ಆದರಾತಿಥ್ಯ ಮರೆಯದಿರಲಿ ಎಂಬುದು. ಇದಕ್ಕೆ ವ್ಯವಸ್ಥಿತ ಯೋಜನೆ ಮಾಡಿಕೊಟ್ಟವರು ಮಹಾಲಿಂಗಪ್ಪ ಬಿ.

ಯಾರ ಮನೆ ಎಷ್ಟು ವಿಶಾಲವಾಗಿದೆ? ಯಾರಿಗೆ ಎಲ್ಲಿ ಅನುಕೂಲವಾಗಬಹುದು ಎಂಬ ಸೂಕ್ಷ್ಮಗಳನ್ನೆಲ್ಲ ಗಮನದಲ್ಲಿರಿಸಿಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಯಾವ ಜಾತಿ, ಮತ, ಪಂಥಗಳ ಭೇದವಿಲ್ಲದೇ `ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ` ಎಂಬಂತೆ ಎಲ್ಲರೂ ಅತಿಥಿಗಳಿಗಾಗಿ ಕಾಯುತ್ತಿದ್ದಾರೆ.

ಆದರೆ ಈ ಮನೆಮನೆಯ ಆತಿಥ್ಯವೂ ಸಮ್ಮೇಳನದ ಒಂದು ಸಂಪ್ರದಾಯವಾಗಲಿ ಎಂಬುದು ಇಲ್ಲಿಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಶೇಖರಗೌಡ ಪಾಟೀಲ ಅವರ ಅಭಿಪ್ರಾಯವಾಗಿದೆ. 

ನಗರದಲ್ಲಿ ವಾಸ್ತವ್ಯದ ಕೊರತೆ ಇರುವುದು ನಿಜ. ಈ ಕಾರಣದಿಂದಲೇ `ಮನೆ ಮನೆ ಅತಿಥಿ` ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಆದರೆ ಇದರಿಂದ ನಗರದ ವ್ಯಾಪಾರಸ್ಥರಷ್ಟೇ ಅಲ್ಲ ಅವರ ಕುಟುಂಬದವರೂ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಂತೆ ಆಯಿತು. ಜನ ಸಾಮಾನ್ಯರನ್ನು ಸಮ್ಮೇಳನದತ್ತ ಕರೆತರುವಂತಾಯಿತು. 

ಇದೊಂದು ಬಗೆಯ ಸಾರ್ಥಕ್ಯ. ಇನ್ನೊಂದು ಅಂಶವೆಂದರೆ ಈ ಮುಖೇನವಾದರೂ ಕನ್ನಡದ ಹಿರಿಯ ಸಾಹಿತಿಗಳಿಗೆ ಈ ಮಣ್ಣಿನ ಸೊಗಡಿನ ಪರಿಚಯವಾಗುತ್ತದೆ. ಪರಿಷತ್‌ನ ಅವಲಂಬನೆ ತಪ್ಪುತ್ತದೆ. ಕೆಲವೊಮ್ಮೆ ಅನುಕೂಲಗಳ ನಡುವೆಯೂ ಲೋಪದೋಷಗಳು ಕಂಡು ಬರುತ್ತವೆ. ಆದರೆ ಮನೆಮನೆಯ ಆತಿಥ್ಯದಲ್ಲಿ ಮಾತ್ರ ಇಂಥ ಯಾವ ದೂರುಗಳೂ ಇರುವುದಿಲ್ಲ. ಪ್ರತಿ ಸಮ್ಮೇಳನದಲ್ಲಿಯೂ ಇಂಥದ್ದೊಂದು ವ್ಯವಸ್ಥೆ ಕಾಯಂ ಆದರೆ ಅಖಂಡ ಕರ್ನಾಟಕದ ಜನಜೀವನದ ತುಣುಕು, ಸಾಹಿತಿಗಳ ಅನುಭೂತಿಗೆ ದೊರೆಯುತ್ತದೆ ಎಂಬುದು ಅವರ ಅನಿಸಿಕೆಯಾಗಿದೆ.

ಈಗಾಗಲೇ ತಮ್ಮ ಮನೆಯಲ್ಲಿ ಕೋಣೆಯನ್ನೂ, ಸ್ನಾನದ ಮನೆಯನ್ನೂ ಸಜ್ಜುಗೊಳಿಸಿರುವ ಗಂಗಾವತಿಯ ಜನರು, ಗಂಗೆಯ ಹರಿವಿನ ವಿಸ್ತಾರದಷ್ಟೇ ವಿಶಾಲ ಮನೋಭಾವ ಉಳ್ಳವರು. ಆತಿಥ್ಯಕ್ಕೆ ಸಿದ್ಧರಾಗಿದ್ದಾರೆ ಇವರು - ಪ್ರಜಾವಾಣಿ

No comments:

Post a Comment