78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Sunday, October 9, 2011

ಏಳಿ, ಎದ್ದೇಳಿ, ಕನ್ನಡಮ್ಮನ ಸೇವೆಗೆ ಸಿದ್ಧರಾಗಿ : ಶೇಖರಗೌಡ ಮಾಲಿಪಾಟೀಲ.


ಗಂಗಾವತಿ, ಅ.೦೮ :  ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಗಳು ಸಮೀಪಿಸುತಿದ್ದು ಸರ್ವರೂ ತನು-ಮನ-ಧನದಿಂದ ಸಹಕರಿಸಿ ಎಂದು ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ  ಶೇಖರಗೌಡ ಮಾಲಿಪಾಟೀಲ ಹೇಳಿದರು. ಅವರು ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸ್ವಾಗತ ಸಮಿತಿ ಕಛೇರಿಯಲ್ಲಿ ಜಿಲ್ಲಾದರ್ಶನ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಕನ್ನಡ ತಾಯಿಯ ಕೆಲಸಮಾಡಲು ೩೫ಕ್ಕೂ ಹೆಚ್ಚು ಉಪಸಮಿತಿಗಳು ಸನ್ನದ್ಧವಾಗಿದ್ದು, ಜಿಲ್ಲೆಯ ಸರ್ವಜನರೂ ಪಾಲ್ಗೊಂಡು ರಾಜ್ಯದ ಇತರೆ ಜಿಲ್ಲೆಗಳಿಂದ ಬರುವ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ಸ್ವಾಗತ ಮಾಡಲು ಕಂಕಣಬದ್ಧವಾಗಿದ್ದೇವೆ. ಬರುವ ದಿನಗಳಲ್ಲಿ ಸಚಿವರು, ಸಂಸದರು, ಶಾಸಕರು, ಹಾಗೂ ಮಾಜಿಸಚಿವರು, ಸಂಸದರು, ಶಾಸಕರು ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಉಪಸಮಿತಿಗಳು ಒಡಗೂಡಿ ಮನೆ-ಮನೆ ಅತಿಥಿ ಎಂಬ ವಸತಿ ಕಾರ್ಯಕ್ರಮಕ್ಕಾಗಿ ಪಾದಯಾತ್ರೆ ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ದರ್ಶನ ಸಮಿತಿಯ ಅಧ್ಯಕ್ಷ ದೇವಪ್ಪ ಕಾಮದೊಡ್ಡಿ ಜಿಲ್ಲಾ ಕ.ಸಾ.ಪ ಗೌರವ ಕಾರ್ಯದಶಿ ಎಸ್.ಬಿ.ಗೊಂಡಬಾಳ, ಸ್ವಾಗತ ಸಮಿತಿ ಸಹಕಾರ್ಯದರ್ಶಿ ಹಾಗೂ ತಾಲೂಕಾ ಕ.ಸಾ.ಪ ಅಧ್ಯಕ್ಷ  ಬಸವರಾಜ ಕೋಟಿ  ಜಿಲ್ಲಾದರ್ಶನ ಸಮಿತಿಯ ಪ್ರಧಾನಕಾರ್ಯದರ್ಶಿ  ಸಂದೀಪ ಪಾಟೀಲ, ಕಾರಟಗಿಯ ಪ್ರಹ್ಲಾದ ಜೋಷಿ ಇತರರು ಉಪಸ್ಥಿತರಿದ್ದರು.

ಜಿಲ್ಲೆಯ ಐತಿಹಾಸಿಕ ಸ್ಥಳಗಳ ಮಾಹಿತಿಗೆ ಜಿಲ್ಲಾದರ್ಶನ ಸಮಿತಿ ಸನ್ನದ್ಧ : ದೇವಪ್ಪ ಕಾಮದೊಡ್ಡಿ.


 

ಗಂಗಾವತಿ, ಅ.೦೮ :  ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಮಗ್ರ ಐತಿಹಾಸಿಕ ಮಾಹಿತಿಗೆ ಜಿಲ್ಲಾದರ್ಶನ ಸಮಿತಿ ಸನ್ನದ್ಧವಾಗಿದೆ ಎಂದು ಜಿಲ್ಲಾದರ್ಶನ ಹಾಗೂ ನಗರಸಭೆ ಸದಸ್ಯ ದೇವಪ್ಪ ಕಾಮದೊಡ್ಡಿ ಹೇಳಿದರು.
ಅವರು ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಲಯದಲ್ಲಿ ನಡೆದ ಜಿಲ್ಲಾದರ್ಶನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಈಗಾಗಲೇ ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲಾ ಉಪಸಮಿತಿಗಳು ಸಿದ್ಧವಾಗಿದ್ದು, ಅದೇ ರೀತಿಯಲ್ಲಿ ಕೊಪ್ಪಳ ಜಿಲ್ಲೆಯ ನಮ್ಮ ಐತಿಹಾಸಿಕ ಮಾಹಿತಿಯನ್ನು ಮೂರು ದಿನ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ ದರ್ಶನ ಮಾಡಿಸಲು ೩ಕ್ಕೂ ಹೆಚ್ಚು ಬಸ್ಸಿನ ವ್ಯವಸ್ಥೆ ಮಾಡಲಾಗುವುದು. ಆನೆಗುಂದಿ ಹಾಗೂ ಹಂಪಿ ವೃತ್ತದ ಐಸಿಹಾಸಿಕ ಸ್ಥಳಗಳು, ಕೊಪ್ಪಳ,ಕುಕನೂರು ಹಾಗೂ ವೆಂಕಟಗಿರಿ ಮಾರ್ಗದ ಐತಿಹಾಸಿಕ ಸ್ಥಳಗಳು, ಕನಕಗಿರಿ ಹಾಗೂ ನವಲಿ ಮಾರ್ಗದ ಐತಿಹಾಸಿಕ ಸ್ಥಳಗಳು ಹೀಗೆ ಮೂರು ಭಾಗಗಳನ್ನಾಗಿ ಮಾಡಿ ಪ್ರವಾಸ ಏರ್ಪಡಿಸಲಾಗುತ್ತದೆ. ಒಟ್ಟಾರೆ ಮಾದರಿ ರೀತಿಯಲ್ಲಿ ಜಿಲ್ಲಾದರ್ಶನ ಸಮಿತಿ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮಾಡಿಸುತ್ತದೆ ಎಂದರು. ಈ ಸಮ್ಮೇಳನ ನಮ್ಮೆಲ್ಲರ ನಾಡ ಹಬ್ಬವಾಗಿ ಎಲ್ಲರೂ ತನು-ಮನ-ಧನದಿಂದ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ   ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ   ಎಸ್.ಬಿ.ಗೊಂಡಬಾಳ, ಸ್ವಾಗತ ಸಮಿತಿ ಸಹಕಾರ್ಯದರ್ಶಿ ಹಾಗೂ ತಾಲೂಕಾ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ  ಜಿಲ್ಲಾದರ್ಶನ ಸಮಿತಿಯ ಪ್ರಧಾನಕಾರ್ಯದರ್ಶಿ ಸಂದೀಪ ಪಾಟೀಲ, ಕಾರಟಗಿಯ ಪ್ರಹ್ಲಾದ ಜೋಷಿ ಇತರರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ರಾಜಕೀಯ ಸಲ್ಲದು


ಗಂಗಾವತಿ, ಅ.೦೮ : ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಸಲ್ಲದು, ಸಮ್ಮೇಳನದ ಯಶಸ್ಸಿಗೆ ಸರ್ವರೂ ಶ್ರಮಿಸೋಣ ಎಂದು ನಗರ ಅಲಂಕಾರ ಮತ್ತು ಮಹಾದ್ವಾರ ಸಮಿತಿಯ ಉಪಾಧ್ಯಕ್ಷ   ಸತ್ಯನಾರಾಯಣ ದೇಶಪಾಂಡೆ ಶ್ರೀರಾಮನಗರ ಹೇಳಿದರು.
ಅವರು ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯಲ್ಲಿ ನಗರ ಅಲಂಕಾರ ಮತ್ತು ಮಹಾದ್ವಾರ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ, ನಮ್ಮ ಭಾಗಕ್ಕೆ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಈ ಸಮ್ಮೇಳನದ ಯಶಸ್ಸಿಗೆ ಸರ್ವರೂ ಎಲ್ಲ ರೀತಿಯಿಂದಲೂ ಕಂಕಣಬದ್ಧರಾಗೋಣ. ರಾಜಕೀಯ ಬೆರಸದೆ, ಒಬ್ಬರ ಮೇಲೊಬ್ಬರು ಆಪಾದನೆ ಮಾಡುವುದನ್ನು ಬಿಟ್ಟು, ಹಂತ ಹಂತವಾಗಿ ಸಮ್ಮೇಳನಕ್ಕಾಗಿ ಉಳಿದ ಸ್ವಲ್ಪ ಸಮಯವನ್ನು ಸದುಪಯೋಗ ಪಡಿಸಿಕೊಂಡು ಮಾದರಿ ರೀತಿಯಲ್ಲಿ ಸಮ್ಮೇಳನ ವಿಜ್ರಂಭಿಸುವಂತೆ ಮಾಡುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಗರ ಅಲಂಕಾರ ಮತ್ತು ಮಹಾದ್ವಾರ ಸಮಿತಿಯ ಅಧ್ಯಕ್ಷರಾದ ಶ್ರೀ ಭುವನೇಶ ಹೊಸಕೇರಿ ಮಾತನಾಡಿ, ನಗರ ಅಲಂಕಾರದ ಸಂಪೂರ್ಣ ಜವಬ್ದಾರಿಯನ್ನು ಸಮಿತಿಗೆ ವಹಿಸಿಕೊಡಿ, ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಜಾತ್ರೆಗೆ ವಿಶಿಷ್ಟವಾದ ರೀತಿಯಲ್ಲಿ ನಗರವನ್ನು ಅಲಂಕರಿಸಲು ಬದ್ಧರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಪ್ರಧಾನಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಕ.ಸಾ.ಪ.ದ ಗೌರವ ಕಾರ್ಯದರ್ಶಿ  ಎಸ್.ಬಿ.ಗೊಂಡಬಾಳ, ಸಮ್ಮೇಳನದ ಸಹಕಾರ್ಯದರ್ಶಿ ಹಾಗೂ ತಾಲೂಕಾ ಕ.ಸಾ.ಪ.ದ ಅಧ್ಯಕ್ಷರಾದ    ಬಸವರಾಜ ಕೋಟಿ, ಸಮಿತಿಯ ಸದಸ್ಯರಾದ  ಕೆ.ಆರ್. ವೆಂಕಟೇಶ, ಸಮಿತಿಯ ಪ್ರಧಾನಕಾರ್ಯದರ್ಶಿ  ನರಸಪ್ಪ ಅಮರಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ


 

ಕೊಪ್ಪಳ ಅ.  :  ಜಿಲ್ಲೆಯ ಗಂಗಾವತಿಯಲ್ಲಿ ಬರುವ ನವೆಂಬರ್ ತಿಂಗಳಿನಲ್ಲಿ ಜರುಗುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದ್ದು, ವಿವಿಧ ಸಮಿತಿಗಳ ಸಭೆಗೆ ದಿನಾಂಕ ನಿಗದಿಪಡಿಸಲಾಗಿದೆ.
  ಸಮ್ಮೇಳನವನ್ನು ಅಚ್ಚುಕಟ್ಟಾಗಿ ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆಯಾ ಸಮಿತಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.  ಇದಕ್ಕಾಗಿ ಹಲವು ಸಮಿತಿಗಳ ಸಭೆಗೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.  ಗಂಗಾವತಿ ಎ.ಪಿ.ಎಂ.ಸಿ. ಆವರಣದಲ್ಲಿನ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿಯಲ್ಲಿ, ವಿವಿಧ ಸಮಿತಿ ಸಭೆಗಳು ಜರುಗುವ ವಿವರ ಇಂತಿದೆ.  ಅ. ೮ ರಂದು ಬೆಳಿಗ್ಗೆ ೧೧ ಗಂಟೆಗೆ ನಗರ ಅಲಂಕಾರ ಮತ್ತು ಮಹಾದ್ವಾರ ಸಮಿತಿ ಸಭೆ ನಡೆಯಲಿದೆ.  ಅದೇ ದಿನ ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ದರ್ಶನ ಸಮಿತಿ ಸಭೆ, ಅ. ೯ ರಂದು ಬೆಳಿಗ್ಗೆ ೧೧ ಗಂಟೆಗೆ ಸ್ವಾಗತ, ವಿಚಾರಣೆ ಹಾಗೂ ಮಾಹಿತಿ ಸಮಿತಿ, ಮಧ್ಯಾಹ್ನ ೩ ಗಂಟೆಗೆ ವೇದಿಕೆ ನಿರ್ವಹಣಾ ಸಮಿತಿ, ಅ. ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಸ್ವಾಗತ ಸಮಿತಿ, ಮಧ್ಯಾಹ್ನ ೩ ಗಂಟೆಗೆ ಸಮನ್ವಯ ಸಮಿತಿ, ಅ. ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಅತಿಥಿ ಸತ್ಕಾರ ಸಮಿತಿ, ಮಧ್ಯಾಹ್ನ ೩ ಗಂಟೆಗೆ ಜಾಹೀರಾತು ನಿರ್ವಹಣೆ ಸಮಿತಿ, ಅ. ೧೩ ರಂದು ಬೆಳಿಗ್ಗೆ ೧೧ ಗಂಟೆಗೆ ಸಾಂಸ್ಕೃತಿಕ ಸಮಿತಿ, ಮಧ್ಯಾಹ್ನ ೩ ಗಂಟೆಗೆ ವಸತಿ ಸಮಿತಿ, ಅ. ೧೪ ರಂದು ಬೆಳಿಗ್ಗೆ ೧೧ ಗಂಟೆಗೆ ಸನ್ಮಾನ ಸಮಿತಿ, ಮಧ್ಯಾಹ್ನ ೩ ಗಂಟೆಗೆ ಸಾರಿಗೆ ನಿರ್ವಹಣಾ ಸಮಿತಿ, ಅ. ೧೫ ರಂದು ಬೆಳಿಗ್ಗೆ ೧೧ ಗಂಟೆಗೆ ಸ್ವಯಂ ಸೇವಕರ ಸಮಿತಿ ಹಾಗೂ ಅದೇ ದಿನ ಮಧ್ಯಾಹ್ನ ೩ ಗಂಟೆಗೆ ಮಹಿಳಾ ಸಮಿತಿ ಸಭೆ ಜರುಗಲಿವೆ.
   ಆಯಾ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಸದಸ್ಯರುಗಳು ಸೇರಿದಂತೆ ಸಂಬಂಧಪಟ್ಟವರು ಸಭೆಯಲ್ಲಿ ಭಾಗವಹಿಸುವಂತೆ ಕಸಾಪ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರು ಕೋರಿದ್ದಾರೆ.

ಸಮ್ಮೇಳನದ ಯಶಸ್ವಿಗೆ ಶಿಕ್ಷಕರು ಒಂದಾಗಿ ಶ್ರಮಿಸೋಣ : ಸಮ್ಮೇಳನದ ಸುದ್ದಿಗಳು


ಕೊಪ್ಪಳ :  ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಬರುವ ನವೆಂಬರ್ ತಿಂಗಳಿನಲ್ಲಿ ನಡೆಯುವ ಅಖಿಲಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅದ್ಧೂರಿ ಯಶಸ್ಸಿಗೆ ಶಿಕ್ಷಕರು ವಿಶ್ವಾಸಭರಿತರಾಗಿ ದುಡಿಯುತ್ತೇವೆ ಎಂದು ರಾಷ್ಟ್ರಪ್ರಶಸ್ತಿ ಪುರಷ್ಕೃತ ಶಿಕ್ಷಕ ಮತ್ತು ನೋಂದಣಿ ಸಮಿತಿ ಅಧ್ಯಕ್ಷ ಮಲ್ಲನಗೌಡ ಗೌಡರ ಹೇಳಿದರು.
ಗಂಗಾವತಿ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಕ.ಸಾ.ಪ ಸ್ವಾಗತ ಸಮಿತಿ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ನೋಂದಣಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
          ತಾಲೂಕಾ ಕೇಂದ್ರಕ್ಕೆ ಅಖಿಲಭಾರತ ಮಟ್ಟದ ಸಮ್ಮೇಳನ ದೊರೆತಿರುವುದು ನಮ್ಮೆಲ್ಲರ ಭಾಗ್ಯವೇ ಸರಿ. ಈ ಸಮ್ಮೇಳನದ ಯಶಸ್ಸಿಗೆ ಸರ್ವರೂ ಕೈ ಜೋಡಿಸಿ ಕನ್ನಡಮ್ಮನ ತೇರು ಎಳೆಯಲು ಸಜ್ಜಾಗೋಣ, ದೂರದ ಜಿಲ್ಲೆಗಳ ಪ್ರತಿನಿಧಿಗಳ ನೋಂದಾವಣೆಗೆ ಒಂದು ಕೌಂಟರ್ ಮಾಡಲಾಗುವುದು, ಸಮೀಪದ ಜಿಲ್ಲೆಗಳಿಗೆ ಎರಡು ಕೌಂಟರ್ ಮಾಡಲಾಗುವುದು. ಕೊಪ್ಪಳ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಯ ಶಿಕ್ಷಕರು ಸೇರಿದಂತೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ಹಾಜರಾತಿ ಹಾಗೂ ಅನ್ಯಕಾರ್ಯನಿಮಿತ್ಯ ಪ್ರಮಾಣ ಪತ್ರವನ್ನು ನೋಂದಣಿ ಸಮಯದಲ್ಲಿಯೇ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಕ್ಷಕರುಗಳಾದ ಲಿಂಗಾರೆಡ್ಡಿ, ಶಿವಪ್ರಸಾದ, ರೇವಣಸಿದ್ಧಪ್ಪ, ನಾಗಪ್ಪ ಬಡಿಗೇರ, ಚಿದಾನಂದಪ್ಪ ಮೇಟಿ ಇನ್ನಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಕ.ಸಾ.ಪ ಗೌರವಕಾರ್ಯದರ್ಶಿ ಎಸ್.ಬಿ.ಗೊಂಡಬಾಳ, ತಾಲೂಕಾ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ, ತಾಲೂಕಾ ಗೌರವಕಾರ್ಯದರ್ಶಿ ಬಸವರೆಡ್ಡಿ ಆಡೂರ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವರೂ ಬನ್ನಿ : ಸಿಂಗನಾಳ
  ಕೊಪ್ಪಳ ಅ.  : ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆಯಲು ಸರ್ವರೂ ಬನ್ನಿ ಎಂದು ವಾಣಿಜ್ಯೋದ್ಯಮಿ ಹಾಗೂ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಸಮಿತಿಯ ಅಧ್ಯಕ್ಷ ಸುರೇಶ ಸಿಂಗನಾಳ ಹೇಳಿದರು.
ಗಂಗಾವತಿಯ ಎ.ಪಿ.ಎಂ.ಸಿ ಆವರಣದಲ್ಲಿರುವ ಸ್ವಾಗತ ಸಮಿತಿಯ ಕಾರ್ಯಾಲಯದಲ್ಲಿ ನಡೆದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪುಸ್ತಕ ಪ್ರದರ್ಶನ ಮಾರಾಟಗಾರರಿಗಾಗಿ ಸುಮಾರು ೪೦೦ ಮಳಿಗೆಗಳನ್ನು ನಿರ್ಮಿಸಿ ಒದಗಿಸಲಾಗುವುದು,  ಅಲ್ಲದೆ ಅಂತಹವರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು.  ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆ ತೆಗೆದುಕೊಳ್ಳುವಂತಹವರು ಕೇಂದ್ರ ಕನ್ನಡ ಸಾಹಿತ್ಯ ಸಮಿತಿ ಬೆಂಗಳೂರು ಮತ್ತು ಸಮ್ಮೇಳನ ಸ್ವಾಗತ ಸಮಿತಿ ಕಛೇರಿ ಗಂಗಾವತಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡುವವರು ರೂ. ೧೫೦೦/-ಗಳನ್ನು  ಸ್ವಾಗತ ಸಮಿತಿ ಕಛೇರಿಯಲ್ಲಿ ಪಾವತಿಸಿ ಮಳಿಗೆಗಳಿಗಾಗಿ ಅ. ೩೧ ರೊಳಗಾಗಿ ನೋಂದಾಯಿಸಿಕೊಳ್ಳಬೇಕು ಎಂದರು.

ಸಮಿತಿಯ ಕಾರ್ಯದರ್ಶಿ ಹಾಗೂ ಪತ್ರಕರ್ತ ಕೆ.ನಿಂಗಜ್ಜ ಮಾತನಾಡಿ ಸ್ವಾಗತ ಮತ್ತು ವಿಚಾರಣಾ ಕೇಂದ್ರದಲ್ಲಿ ಸೂಕ್ತ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಮೊದಲ ೩೦ ಮಳಿಗೆಗಳನ್ನು ಸರ್ಕಾರಿ ಇಲಾಖೆಗಳಿಗೆ ಮೀಸಲಿಡಲಾಗುವುದು ಎಂದರು.
                     ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ್ ಅವರು ಮಾತನಾಡಿ, ಸಾಹಿತ್ಯಾಸಕ್ತರು, ಸಾಹಿತ್ಯ ಪ್ರೇಮಿಗಳು ಸಕ್ರಿಯವಾಗಿ, ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು.  ಈಗಾಗಲೇ ೩೦ಕ್ಕೂ ಹೆಚ್ಚು ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಸಮಿತಿಯ ಕಾರ್ಯ ಭರದಿಂದ ಸಾಗಿದ್ದು, ಆಯಾ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಸ್ವಾಗತ ಸಮಿತಿಯ ಕಛೇರಿಯಲ್ಲಿ ಭಾವಚಿತ್ರ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸಮ್ಮೇಳನದ ಯಶಸ್ಸಿಗೆ ತನು, ಮನ, ಧನದಿಂದ ಸಹಕರಿಸಿ ಎಲ್ಲರೂ ಸೇರಿ ಮಾದರಿ ಸಮ್ಮೇಳನವನ್ನಾಗಿಸೋಣ ಎಂದರು. 
ಈ ಸಂದರ್ಭದಲ್ಲಿ ಚನ್ನಬಸವ ಸುಂಕದ ಕಾರಟಗಿ, ಸ್ವಾಗತ ಸಮಿತಿ ಜಿಲ್ಲಾ ಕ.ಸಾ.ಪ ಗೌರವಕಾರ್ಯದರ್ಶಿ ಎಸ್.ಬಿ.ಗೊಂಡಬಾಳ, ತಾಲೂಕಾ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ, ತಾಲೂಕಾ ಕ.ಸಾ.ಪ ಗೌರವ ಕಾರ್ಯದರ್ಶಿ ಬಸವರೆಡ್ಡಿ ಆಡೂರ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನದ ಯಶಸ್ಸಿಗೆ ಪೋಲೀಸ್ ಇಲಾಖೆ ಸನ್ನದ್ಧ : ಡಿ.ಎಲ್. ಹಣಗಿ
  ಕೊಪ್ಪಳ  ): ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನೆರವೇರಲು ಹಾಗೂ ಶಾಂತಿ, ಸುವ್ಯವಸ್ಥೆಯಿಂದ ಜರುಗಿಸಲು ಅಗತ್ಯವಾಗಿರುವ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಪೋಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಡಿ.ವೈ.ಎಸ್.ಪಿ. ಡಿ.ಎಲ್. ಹಣಗಿ ಹೇಳಿದರು.
ಗಂಗಾವತಿ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸ್ವಾಗತ ಸಮಿತಿ ಕಾರ್ಯಾಲಯದಲ್ಲಿ ನಡೆದ ಭದ್ರತಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಸಮ್ಮೇಳನದ ಸಲುವಾಗಿ ಹಲವಾರು ಉಪಸಮಿತಿಗಳ ಸಭೆ ನಡೆದಿದೆ, ಸಮ್ಮೇಳನದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಸಮ್ಮೇಳನ ಶಾಂತಿ ಸುವ್ಯವಸ್ಥೆಯಿಂದ ಜರುಗಲು ಅನುಕೂಲವಾಗುವಂತೆ ಭದ್ರತಾ ದೃಷ್ಟಿಯಿಂದ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಡಿ.ವೈ.ಎಸ್.ಪಿ, ಸಿ.ಪಿ.ಐ, ಎ.ಎಸ್.ಐ, ಪಿ.ಎಸ್.ಐ, ಎ.ಎಸ್.ಐ ಸೇರಿ ಶ್ರೇಣಿಯ ೬೦೦ ಜನ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮುಂದಿನ ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಡಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಸಭೆಯು ಪ್ರಧಾನವೇದಿಕೆ, ಎರಡು ಸಮಾನಂತರ ವೇದಿಕೆಗಳು, ಮಾಧ್ಯಮ ಕೇಂದ್ರ, ಮೆರವಣಿಗೆ, ಊಟದ ಕೇಂದ್ರ, ನೋಂದಣಿ ಕೇಂದ್ರ, ಮಹಿಳೆಯರ ವಸತಿ ಇರುವ ಕೇಂದ್ರಗಳು, ವಾಹನ ನಿಲುಗಡೆ ಸ್ಥಳಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
         ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ, ನಗರ ಪೋಲೀಸ್ ಠಾಣಾ ಪಿ.ಐ ಶಿವಕುಮಾರ್ ಎಸ್. ಗ್ರಾಮೀಣ ಪೋಲೀಸ್ ಠಾಣಾ ಸಿ.ಪಿ.ಐ ರುದ್ರಪ್ಪ ಉಜ್ಜನಕೊಪ್ಪ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಎಸ್.ಬಿ ಗೊಂಡಬಾಳ, ತಾಲೂಕ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ ಹಾಗೂ ನಗರ ಸಂಚಾರಿ ಪೋಲೀಸ್ ಠಾಣಾ ಪಿ.ಎಸ್.ಐ ಪಾಟೀಲ್ ಉಪಸ್ಥಿತರಿದ್ದರು.

78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೊಸ ಲಾಂಛನ

78th Akila Bharata kannada sahitya sammelana New logo

ಸಾಹಿತ್ಯ ಸಮ್ಮೇಳನ : ಸಮಿತಿಗಳ ಪುನಾರಚನೆ


ಗಂಗಾವತಿ :  ಸಾಹಿತ್ಯ ಸಮ್ಮೇಳನಕ್ಕಾಗಿ ರಚನೆಯಾಗಿರುವ ಹಲವಾರು ಸಮಿತಿಗಳನ್ನು  ಪುನಾರಚನೆ ಮಾಡಿ ಕನಕಗಿರಿ,ಕಾರಟಗಿಯ ಭಾಗದ ಆಸಕ್ತರನ್ನು ಒಳಗೊಂಡಂತೆ ಹೊಸ ಸಮಿತಿಗಳನ್ನು ರಚಿಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ. ಅವರು  ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಯಾವುದೇ ಗೊಂದಲಗಳಿಲ್ಲದೇ ಎಲ್ಲರೂ ಒಟ್ಟಾಗಿ ಕನ್ನಡ ಜಾತ್ರೆಯನ್ನು ಆದ್ದೂರಿಯಾಗಿ ನಡೆಸೋಣ ಎಂದರು.
 ಇದೇ ಸಂದರ್ಭದಲ್ಲಿ  ಶಾಸಕ ಶಿವರಾಜ ತಂಗಡಗಿ ಮಾತನಾಡಿ  ಎಲ್ಲರೂ ಒಂದಾಗಿ ಕನ್ನಡ ಜಾತ್ರೆಯನ್ನು ನಡೆಸೋಣ ಎಂದರು.  ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಲಲಿತಾರಾಣಿ,ಸಿಂಗನಾಳ ವಿರುಪಾಕ್ಷಪ್ಪ, ಅಮರೇಶ ಕುಳಗಿ, ನಾಗರಾಜ ಬಿಲ್ಗಾರ, ನೆಕ್ಕಂಟಿ ಸೂರಿಬಾಬು , ಕನ್ನಾಳ ಪಂಪಾಪತಿ ,ಬಸವರಾಜ ಕೋಟೆ,ಎಸ್.ಬಿ.ಗೊಂಡಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಗಂಗಾವತಿ : ಸಮ್ಮೇಳನ ವೇದಿಕೆ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ

ಗಂಗಾವತಿ : 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಭರದಿಂದ ಸಾಗಿದ್ದು  ಕನಕಗಿರಿ ರಸ್ತೆಯಲ್ಲಿರುವ ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಯಿತು. ತಾಲೂಕ ಕ್ರೀಡಾಂಗಣದಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗುವುದು , ಜಿಲ್ಲೆಯ ಕಲಾವಿದರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಕಸಾಪ ಜಿಲ್ಲಾ ಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನ


ಕೊಪ್ಪಳ ಸೆ. ೦೨ (ಕ.ವಾ): ಬರುವ ನವೆಂಬರ್ ತಿಂಗಳಿನಲ್ಲಿ ಗಂಗಾವತಿಯಲ್ಲಿ ನಡೆಯಲಿರುವ ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಲಿದ್ದಾರೆ.  ಈ ಕುರಿತ ಒಪ್ಪಿಗೆ ಪತ್ರವನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಸೆ. ೨ ರಂದು ಶುಕ್ರವಾರ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಸಲ್ಲಿಸಿದರು.
  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಸಲಾಗುತ್ತಿದ್ದು, ಸಮ್ಮೇಳನವನ್ನು ಯಶಸ್ವಿಯಾಗಿ ಆಚರಿಸಲು ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಲು ಸಂತೋಷದಿಂದ, ಸರ್ವಸಮ್ಮತದಿಂದ ಒಪ್ಪಿದ್ದಾರೆ ಎಂದು ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ತಿಳಿಸಿದರು.
ವಸತಿ ಗೃಹ ನಿರ್ಮಾಣ : ಕೊಪ್ಪಳ ನಗರದಲ್ಲಿರುವ ಸರ್ಕಾರಿ ನೌಕರರಿಗೆ ಸದ್ಯ ವಸತಿ ಗೃಹಗಳು ಬಹಳ ಕಡಿಮೆ ಪ್ರಮಾಣದಲ್ಲಿದ್ದು, ಇದರಿಂದಾಗಿ ಸರ್ಕಾರಿ ನೌಕರರಿಗೆ ತುಂಬಾ ತೊಂದರೆ ಉಂಟಾಗಿದೆ.  ಕೊಪ್ಪಳ ನಗರದಲ್ಲಿ ನೂತನವಾಗಿ ಸುಮಾರು ೫೦೦ ಸರ್ಕಾರಿ ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಅಲ್ಲದೆ ಸದ್ಯ ಕೊಪ್ಪಳ ನಗರದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡವು ಅತ್ಯಂತ ಚಿಕ್ಕದಾಗಿದ್ದು, ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪು ಸರ್ಕಾರಿ ನೌಕರರಲ್ಲಿ ಚಿರಸ್ಥಾಯಿಯಾಗುವಂತೆ ಉಳಿಯುವಂತೆ ಮಾಡಲು, ಸಮ್ಮೇಳನದ ಸಂದರ್ಭದಲ್ಲಿಯೇ ನೌಕರರ ಸಂಘದ ನೂತನ ಕಟ್ಟಡಕ್ಕಾಗಿ ಒಂದು ಸೂಕ್ತ ನಿವೇಶನವನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
  ಸರ್ಕಾರಿ ನೌಕರರ ಸಂಘದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೌಕರರು ಒಂದು ದಿನದ ವೇತನ ನೀಡಲು ಒಪ್ಪಿಗೆ ನೀಡಿರುವುದು ಸಂತೋಷದಾಯಕ ಸಂಗತಿಯಾಗಿದೆ.  ಸಮ್ಮೇಳನವನ್ನು ಯಶಸ್ವಿಯಾಗಿಸಲು ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಶ್ರಮಿಸುವಂತೆ ಮನವಿ ಮಾಡಿದರು.  ಅಲ್ಲದೆ ಕೊಪ್ಪಳ ನಗರದಲ್ಲಿ ಸರ್ಕಾರಿ ನೌಕರರಿಗೆ ಸೂಕ್ತ ವಸತಿ ಗೃಹಗಳು ಇಲ್ಲದೇ ಇರುವುದು ಗಮನಕ್ಕೆ ಬಂದಿದ್ದು, ಸುಮಾರು ೫೦೦ ನೂತನ ವಸತಿ ಗೃಹಗಳ ನಿರ್ಮಾಣ ಕುರಿತಂತೆ ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.  ಅಲ್ಲದೆ ಸಂಘದ ಕಟ್ಟಡಕ್ಕೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾದಿಕಾರಿ ತುಳಸಿ ಮದ್ದಿನೇನಿ ಅವರು ಭರವಸೆ ನೀಡಿದರು.
  ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಜುಮ್ಮನ್ನವರ,  ಪದಾಧಿಕಾರಿಗಳಾದ ಗುಂಡಪ್ಪ, ಟಿ.ಕೆ. ಸಾಲಿ, ಚಿಕ್ಕ ನರಗುಂದ, ವಾರ್ತಾಧಿಕಾರಿ ತುಕಾರಾಂ ರಾವ್, ಮೌಲಾಸಾಬ್, ಬಸವರಾಜ ಶೀಗೇನಹಳ್ಳಿ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಅಗತ್ಯ ಅನುದಾನ- ಲಕ್ಷ್ಮಣ ಸವದಿ

ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಅಗತ್ಯ ಅನುದಾನ- ಲಕ್ಷ್ಮಣ ಸವದಿ

ಕೊಪ್ಪಳ ಆ. ೧೫ (ಕ.ವಾ): ಗಂಗಾವತಿಯಲ್ಲಿ ಬರುವ ನವೆಂಬರ್ ೧೮ ರಿಂದ ೨೦ ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ನಡೆಸಲು ಸರ್ಕಾರದಿಂದ ಅಗತ್ಯ ಅನುದಾನವನ್ನು ಒದಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಹೇಳಿದ್ದಾರೆ.
೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಮ್ಮೇಳನದ ಸ್ವಾಗತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಲಿರುವ ಗಂಗಾವತಿಯಲ್ಲಿ ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿಯ ಸಮ್ಮೇಳನಕ್ಕೆ ೩. ೬೦ ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದ್ದು, ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ತಲಾ ೧ ಕೋಟಿ ರೂ.ಗಳ ಅನುದಾನ ಒದಗಿಸಿದೆ. ಗಂಗಾವತಿಯಲ್ಲಿ ಜರುಗುವ ೭೮ನೇ ಸಮ್ಮೇಳನಕ್ಕೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಮ್ಮೇಳನವನ್ನು ಅದ್ಧೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಸಂಪನ್ಮೂಲ ಕ್ರೋಢೀಕರಿಸುವುದು ಅತ್ಯಂತ ಮಹತ್ವದ ವಿಚಾರವಾಗಿದ್ದು, ರಾಜ್ಯ ಸರ್ಕಾರಿ ನೌಕರರಿಂದ ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ಒದಗಿಸುವುದಾಗಿ ನೌಕರರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಅಲ್ಲದೆ ಜಿಲ್ಲಾ ಪಂಚಾಯತಿಯಿಂದ ೪೦ ಲಕ್ಷ, ಗ್ರಾಮ ಪಂಚಾಯತಿಗಳಿಂದ ೨೫ ಲಕ್ಷ, ಹೀಗೆ ಅನುದಾನವನ್ನು ಒಟ್ಟುಗೂಡಿಸಲು ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ. ಸಮ್ಮೇಳನವನ್ನು ಯಶಸ್ವಿಗೊಳಿಸಲು ಈ ಭಾಗದ ಪ್ರಮುಖ ಕೈಗಾರಿಕೆಗಳು, ರೈಸ್ ಮಿಲ್ ಮಾಲೀಕರು, ವಿವಿಧ ಕ್ಷೇತ್ರಗಳ ಉದ್ಯಮಿಗಳು, ಸ್ಥಳೀಯ ಸಂಸ್ಥೆಗಳು ಸಹಕಾರ ನೀಡುವರೆಂಬ ವಿಶ್ವಾಸವಿದೆ. ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಅನುಕೂಲವಾಗುವಂತೆ ಈಗಾಗಲೆ ಹಣಕಾಸು, ಮೆರವಣಿಗೆ, ವೇದಿಕೆ, ಆಹಾರ, ವಸತಿ, ಪ್ರಚಾರ, ಭದ್ರತೆ, ಆರೋಗ್ಯ ಸೇರಿದಂತೆ ಒಟ್ಟು ೩೦ ಉಪಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದಲ್ಲಿ ಎರಡು ವೇದಿಕೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಭಾಗದ ಹಿರಿ, ಕಿರಿಯ ಸಾಹಿತಿಗಳು, ಸಂಸದರು, ಶಾಸಕರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಸಮ್ಮೇಳನದ ಯಶಸ್ವಿಗೆ ಶ್ರಮಿಸುವ ಅಗತ್ಯವಿದೆ. ಹಿಂದಿನ ಎಲ್ಲ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚು ಅದ್ಧೂರಿಯಾಗಿ ನಡೆಸಲು ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತಿಗಳು ಸೇರಿದಂತೆ ಎಲ್ಲರೂ ಸಮನ್ವಯತೆಯಿಂದ ಶ್ರಮಿಸುವ ಅಗತ್ಯವಿದೆ. ಬರುವ ಆಗಸ್ಟ್ ೨೭ ರಂದು ಮತ್ತೊಮ್ಮೆ ಸಭೆ ಸೇರಿ ಕಾರ್ಯ ಚಟುವಟಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು. ಒಟ್ಟಾರೆಯಾಗಿ ಗಂಗಾವತಿಯಲ್ಲಿ ನಡೆಯುವ ೭೮ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಇತರೆ ಜಿಲ್ಲೆಯವರಿಗೆ ಮಾದರಿಯಾಗುವ ರೀತಿಯಲ್ಲಿ ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ವಿಶ್ವಾಸಪೂರ್ವಕವಾಗಿ ನುಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಸಮ್ಮೇಳನ ನಡೆಯುವ ಗಂಗಾವತಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕಾಗಿದೆ. ನಗರದ ರಸ್ತೆಗಳು ಹಾಳಾಗಿವೆ. ಸಮ್ಮೇಳನಕ್ಕೆ ಲಕ್ಷಾಂತರ ಜನರು ವಿವಿಧೆಡೆಗಳಿಂದ ಗಂಗಾವತಿಗೆ ಆಗಮಿಸುವ ನಿರೀಕ್ಷೆ ಇದ್ದು, ಸಾರ್ವಜನಿಕರಲ್ಲಿ ಕೊಪ್ಪಳ ಜಿಲ್ಲೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತಾಗಬೇಕು. ನಗರದ ಸ್ವಚ್ಛತೆ, ನೈರ್ಮಲ್ಯ, ಮೂಲಭೂತ ಸೌಕರ್ಯ ಹಾಗೂ ಅಲಂಕಾರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮುಖ್ಯಮಂತ್ರಿಗಳ ಪಟ್ಟಣ ಪ್ರದೇಶಾಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಗಂಗಾವತಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವಂತೆ ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರು ಮಾತನಾಡಿ, ಗಂಗಾವತಿಯಲ್ಲಿ ಸಮ್ಮೇಳನವನ್ನು ಎರಡು ವೇದಿಕೆಯಲ್ಲಿ ನಡೆಸಲಾಗುವುದು. ಒಂದು ಮುಖ್ಯ ವೇದಿಕೆ, ಇನ್ನೊಂದು ಸಮಾನಾಂತರ ವೇದಿಕೆ ನಿರ್ಮಿಸಲಾಗುವುದು. ಸಮ್ಮೇಳನಕ್ಕೆ ಆಗಮಿಸುವ ಸಾಹಿತಿಗಳು, ಕಲಾವಿದರು, ಪ್ರತಿನಿಧಿಗಳಿಗೆ ಉತ್ತಮ ಊಟ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಸಂಸದ ಶಿವರಾಮಗೌಡ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಕೊಪ್ಪಳ ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್. ಕಾಕನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಸೇರಿದಂತೆ ಹಲವು ಗಣ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿದಿಂದ ೨ ಲಕ್ಷ ರೂ. ನೆರವು


ಕೊಪ್ಪಳ ಆ.) : ಬರುವ ನವೆಂಬರ್ ೧೮ ರಿಂದ ೨೦ ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಇವರು ೨ ಲಕ್ಷ ರೂ.ಗಳ ನೆರವು ನೀಡಲು ಸಮ್ಮತಿಸಿದ್ದಾರೆ ಎಂದು ಸಹಕಾರ ಮಹಾಮಂಡಳದ ನಿರ್ದೇಶಕರೂ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರು ತಿಳಿಸಿದ್ದಾರೆ.
೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಗಂಗಾವತಿಯಲ್ಲಿ ಬರುವ ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಸಮ್ಮೇಳನವನ್ನು ಯಶಸ್ವಿಯಾಗಿ ಜರುಗಿಸಲು ಹಾಗೂ ಸಮ್ಮೇಳನದ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಅರ್ಥಪೂರ್ಣ ಸಹಕಾರ ಗೋಷ್ಠಿ ಏರ್ಪಡಿಸಲು ಸಹಕಾರ ಮಹಾಮಂಡಳ ಉದ್ದೇಶಿಸಿದೆ. ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಅಂದರೆ ನವೆಂಬರ್ ೧೯ ರಂದು ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಅಂದು ರೈತರ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರ್ಥಪೂರ್ಣ ಸಹಕಾರ ಗೋಷ್ಠಿ ಏರ್ಪಡಿಸಲಾಗುವುದು. ಸಮ್ಮೇಳನ ಹಾಗೂ ಸಹಕಾರ ಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಲು ಉತ್ತಮ ಅವಕಾಶವಿದ್ದು, ಸಹಕಾರ ಮಹಾ ಮಂಡಳದಿಂದ ಆರ್ಥಿಕ ನೆರವು ಒದಗಿಸುವಂತೆ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಜಿ.ಟಿ. ದೇವೇಗೌಡ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತಂತೆ ಬೆಂಗಳೂರಿನಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯು ಮನವಿಯನ್ನು ಪುರಸ್ಕರಿಸಿ, ಸಾಹಿತ್ಯ ಸಮ್ಮೇಳನಕ್ಕೆ ೨ ಲಕ್ಷ ರೂ. ನೆರವು ಒದಗಿಸಲು ಸಮ್ಮತಿ ಸೂಚಿಸಿದೆ. ಅದೇ ರೀತಿ ರಾಜ್ಯದ ಎಲ್ಲಾ ಸಹಕಾರ ಮಹಾಮಂಡಳಗಳು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಜರುಗಿಸಲು ದೇಣಿಗೆಯನ್ನು ನೀಡುವಂತೆ ರಾಜ್ಯ ಸಹಕಾರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಸಹಕಾರ ಮಹಾಮಂಡಳಗಳಿಗೆ ಮನವಿ ಮಾಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರು ತಿಳಿಸಿದ್ದಾರೆ.