78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Tuesday, November 29, 2011

ಸಿಪಿಕೆಗೆ ಅಧಿಕೃತ ಆಮಂತ್ರಣ


ಮೈಸೂರು:  ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ಸಿ. ಪಿ.ಕೃಷ್ಣಕುಮಾರ್ (ಸಿಪಿಕೆ) ಅವರಿಗೆ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತ ಆಮಂತ್ರಣ ನೀಡಿತು.

ನಗರದ ಪಡುವಾರಹಳ್ಳಿಯಲ್ಲಿರುವ ಸಿಪಿಕೆ ಅವರ ನಿವಾಸದಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರುಪ್ರಸಾದ್ ಅವರು ಸಿಪಿಕೆಯವರನ್ನು ಸನ್ಮಾನಿಸಿ, ಆಮಂತ್ರಣ ಪತ್ರಿಕೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ತಾಲ್ಲೂಕು ಕೇಂದ್ರವಾದ ಗಂಗಾವತಿಯಲ್ಲಿ ಸಮ್ಮೇಳನದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಡಿಸೆಂಬರ್ 9 ರಿಂದ 11ರ ವರೆಗೆ ನಡೆಯಲಿರುವ ಸಮ್ಮೇಳನಕ್ಕೆ ಆಗಮಿಸುವವರ ವಸತಿಗೆ ಶಾಲೆಗಳು, ವಸತಿಗೃಹಗಳನ್ನು ಸಜ್ಜುಗೊಳಿಸಲಾಗಿದೆ. ಊಟದ ವ್ಯವಸ್ಥೆಯನ್ನೂ ವಿಶೇಷವಾಗಿ ಮಾಡಲಾಗುವುದು` ಎಂದು ಹೇಳಿದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲೀಪಾಟೀಲ ಮಾತನಾಡಿ, `ವಸತಿ ವ್ಯವಸ್ಥೆಗಾಗಿ ಮನೆ ಮನೆ ಅತಿಥಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಊರಿನಲ್ಲಿ ಒಟ್ಟು 500 ಮನೆಗಳನ್ನು ಗುರುತಿಸಲಾಗಿದೆ. 

ಪ್ರತಿಯೊಂದು ಮನೆಯಲ್ಲಿ ಇಬ್ಬರು ಅತಿಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಒಟ್ಟು 1000 ಜನರಿಗೆ ವಸತಿ ಕಲ್ಪಿಸಲಾಗುತ್ತಿದೆ. ಜೊತೆಗೆ ಸಮುದಾಯ ಭವನಗಳು, ಶಾಲೆಗಳು ಮತ್ತು ವಸತಿ ಗೃಹಗಳು ಇವೆ. ಆತಿಥ್ಯಕ್ಕೆ ಹೆಸರಾದ ಗಂಗಾವತಿ ತನ್ನ ಘನತೆಗೆ ತಕ್ಕಂತೆ ಸಮ್ಮೇಳನವನ್ನು ಆಯೋಜಿಸಲಿದೆ` ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. 

ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ,  ಕಾರ್ಯಕಾರಿ ಸಮಿತಿ ಸದಸ್ಯ ಸತೀಶಗೌಡ, ರಾಜಶೇಖರ ಅಂಗಡಿ, ಮೈಸೂರು ಜಿಲ್ಲಾ ಘಟಕದ ಮಡ್ಡೀಕೆರೆ ಗೋಪಾಲ್ ಇತರರು ಹಾಜರಿದ್ದರು.          -  ಪ್ರಜಾವಾಣಿ 

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ

















Monday, November 28, 2011

ವೇದಿಕೆ ನಿರ್ಮಾಣ ಕಾರ್ಯ ಆರಂಭ


ಗಂಗಾವತಿ: ನಗರದಲ್ಲಿ ಮುಂದಿನ ಡಿಸೆಂಬರ್‌ನಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ, ಊಟ, ಪುಸ್ತಕ ಪ್ರದರ್ಶನ ಸೇರಿದಂತೆ ಇನ್ನಿತರ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಕಚೇರಿಯಲ್ಲಿ ಸೋಮವಾರ ಸಮ್ಮೇಳನದ ಪ್ರಮುಖ ಘಟ್ಟವಾದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. ಬಳಿಕ ಸಮ್ಮೇಳನದ ತಯಾರಿ ಬಗ್ಗೆ ಮಾತನಾಡಿದರು.
ಹುಬ್ಬಳ್ಳಿ ಮೂಲದ ಸಂಸ್ಥೆಯೊಂದಕ್ಕೆ ಶಾಮಿಯಾನ, ಪೆಂಡಾಲ್, ಮಳಿಗೆ ನಿರ್ಮಾಣದ ಟೆಂಡರ್ ನೀಡಲಾಗಿದೆ. ಈಗಾಗಲೆ 15ಕ್ಕೂ ಹೆಚ್ಚು ಲಾರಿಗಳಲ್ಲಿ ಶಾಮಿಯಾನದ ಸಾಮಗ್ರಿಗಳು ಮುಖ್ಯ ವೇದಿಕೆ ನಿರ್ಮಾಣವಾಗುವ ಸ್ಥಳಕ್ಕೆ ಬಂದಿವೆ ಎಂದರು.
9ರಂದು ನಗರಕ್ಕೆ ಆಗಮಿಸಿಲಿರುವ ಮುಖ್ಯಮಂತ್ರಿ ಸದಾನಂದಗೌಡ ಸಮ್ಮೇಳನಕ್ಕೆ ಚಾಲನೆ ನೀಡುವರು. ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸಮ್ಮೇಳನದ ಕಾರ್ಯಾಧ್ಯಕ್ಷರೂ ಆದ ಶಾಸಕ ತಿಳಿಸಿದರು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಮಾತನಾಡಿ, ಕೊಪ್ಪಳ ಉಪ ಚುನಾವಣೆಯ ಬೆನ್ನ ಹಿಂದೆಯೆ ಬಿಡುವಿಲ್ಲದಂತೆ ಸಮ್ಮೇಳನ ಬಂದಿದೆ. ಸಮ್ಮೇಳನದ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. 
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ತಾಲ್ಲೂಕು ಅಧ್ಯಕ್ಷ ಬಸವರಾಜ ಕೋಟೆ, ಎಸ್.ಬಿ. ಗೊಂಡಬಾಳ, ಎಪಿಎಂಸಿ ಅಧ್ಯಕ್ಷ ಅಮರೇಗೌಡ ಮಾಲಿ ಪಾಟೀಲ್, ಸಿ. ಮಹಾಲಕ್ಷ್ಮಿ ಇತರರು ಇದ್ದರು.



Thursday, November 24, 2011

ಸಾಹಿತ್ಯ ಸಮ್ಮೇಳನ ಸ್ವಾಗತ ಕಮಾನು

gangavathi : ನಗರದಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತ ಕೋರಲು ನಗರದ ಹೊರ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಮಾನು ನಿರ್ಮಾಣ ಕಾಮಗಾರಿಗೆ ಶಾಸಕ ಪರಣ್ಣ ಮುನವಳ್ಳಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಎಪಿಎಂಸಿ ಮೈದಾನಕ್ಕೆ ತೆರಳಿದ ಶಾಸಕರು ಸಮ್ಮೇಳನದ ಮುಖ್ಯ ವೇದಿಕೆ ನಿರ್ಮಾಣವಾಗುವ ಸ್ಥಳ ಪರಿಶೀಲಿಸಿದರು. ಕೈಗೊಳ್ಳಬೇಕಾದ ಅಗತ್ಯ ಕಾರ್ಯಗಳ ಬಗ್ಗೆ ಸಂಬಂಧಿತ ನಗರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮುನವಳ್ಳಿ, ನಗರದ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ತಾವರಗೇರಿ ಮಾರ್ಗದಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡುವ ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ಒಪ್ಪಿಸಲಾಗಿದೆ.
ಬೇರೆ ಅನುದಾನದಲ್ಲಿ ಆನೆಗೊಂದಿ ರಸ್ತೆಯಲ್ಲೂ ಸ್ವಾಗತ ಕಮಾನು ಅಳವಡಿಸಲಾಗುವುದು. ರಸ್ತೆ ವಿಸ್ತೀರಣ ಮತ್ತು ಗಾತ್ರಕ್ಕನುಗುಣವಾಗಿ ಕಮಾನುಗಳನ್ನು 20ರಿಂದ 25ಅಡಿಗಳ ವರೆಗಿನ ಎತ್ತರದಲ್ಲಿ ನಿರ್ಮಿಸಲಾಗುವುದು ಎಂದರು. 
ಸಮ್ಮೇಳನ ಸಂಬಂಧಿ ವಸತಿ ಕಾರ್ಯ ಈಗಾಗಲೆ ಪೂರ್ಣಗೊಂಡಿದೆ. ದಾಸೋಹ ವ್ಯವಸ್ಥೆ ಭರದಿಂದ ಸಾಗಿದೆ. ನಗರದಲ್ಲಿ ಕೈಗೊಂಡ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿದ್ದರೂ, ಸಮ್ಮೇಳನದ ಬಳಿಕದ ಒಂದೆರಡು ದಿನದಲ್ಲಿ ಮುಗಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಸಾರೋಟ ಸ್ವಾಗತ: ಸಮ್ಮೇಳನದ ಅಧ್ಯಕ್ಷ ಸಿ.ಪಿ. ಕೃಷ್ಣ ಕುಮಾರ ಅವರನ್ನು ನಾಲ್ಕು ಕುದುರೆಗಳಿರುವ ಸಾರೋಟಿನಲ್ಲಿ ನಗರದಲ್ಲಿ ಮೆರವಣಿಗೆ ಮಾಡುವ ಉದ್ದೇಶವಿದೆ. ಸಾರೋಟಿನ ವ್ಯವಸ್ಥೆಯ ಬಗ್ಗೆ ಈಗಾಗಲೆ ಹೊಸಪೇಟೆಯಲ್ಲಿ ಸಂಪರ್ಕಿಸಲಾಗಿದೆ ಎಂದರು.
ನೀರಿನ ವ್ಯವಸ್ಥೆ: ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ನೀರಿನ ಸಮಸ್ಯೆಯಾಗದಿರಲೆಂದು ನಗರದ ನಾಲ್ಕು ಖಾಸಗಿ ವಾಟರ್ ಪ್ಲಾಂಟಿನವರು ನಿತ್ಯ ಐದು, ಹತ್ತು, ಐವತ್ತು ಸಾವಿರದಷ್ಟು 200 ಎಂ.ಎಲ್. ಪ್ಯಾಕೆಟ್‌ಗಳನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದಾರೆ ಎಂದು ಶಾಸಕ ತಿಳಿಸಿದರು.
ಮನೆ ಮನೆ ಅತಿಥಿ: ಕನ್ನಡದ ಅಕ್ಷರ ಜಾತ್ರೆಗೆ ಆಗಮಿಸುವ ಬಾಹ್ಯ ಜಿಲ್ಲೆಯವರನ್ನು ತಮ್ಮ ಮನೆಗಳಲ್ಲಿ ಉಳಿಸಿಕೊಳ್ಳುವ ಮತ್ತು ಉಪಚರಿಸುವ ಮನೆಮನೆ ಅತಿಥಿ ವಸತಿ ಯೋಜನೆಗೆ ನಗರದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.  
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಶೇಖರಗೌಡ ಪಾಟೀಲ್, ನಾಗಲಿಂಗಪ್ಪ ಪತ್ತಾರ. ನಗರಸಭಾ ಪೌರಾಯುಕ್ತ ಎಚ್. ನಿಂಗಣ್ಣ ಕುಮ್ಮಣ್ಣನವರ್, ಎಂಜಿನಿಯರ್ ಮಹಾದೇವ, ಪರಶುರಾಮ ಮಡ್ಡೇರ, ಕೆ. ಲಿಂಗನಗೌಡ ಮೊದಲಾದವರಿದ್ದ

Tuesday, November 22, 2011

ಸಾಹಿತ್ಯ ಸಮ್ಮೇಳನ : ಪರಿಷತ್‌ನವರೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ- ತುಳಸಿ ಮದ್ದಿನೇನಿ



ಕೊಪ್ಪಳ ನ.   : ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಡಿಸೆಂಬರ್ ೯, ೧೦ ಮತ್ತು ೧೧ ರಂದು ಗಂಗಾವತಿಯಲ್ಲಿ ಜರುಗಲಿದ್ದು, ಎಲ್ಲ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್, ಜನಪ್ರತಿನಿಧಿಗಳು, ಸ್ವಯಂ ಸೇವಕರೊಂದಿಗೆ ಸಮನ್ವಯತೆಯಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಅಖಿಲಬಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಡೀ ದೇಶದ ಜನರಲ್ಲಿ ಚಿರಸ್ಮರಣೀಯವಾಗಿಸಲು ಎಲ್ಲ ಅಧಿಕಾರಿಗಳು ಸಮನ್ವಯತೆಯಿಮದ ಕೆಲಸ ನಿರ್ವಹಿಸಬೇಕು.  ಈಗಾಗಲೆ ಸಾಹಿತ್ಯ ಪರಿಷತ್ ಮೂವತ್ತಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಿದೆ.  ಈ ಸಮಿತಿಯೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತವೂ ಸಹ ಹಲವು ಸಮಿತಿಗಳನ್ನು ರಚಿಸಿದೆ.  ಈ ಎರಡೂ ಸಮಿತಿಗಳು ತಮಗೆ ವಹಿಸಲಾಗಿರುವ ಹೊಣೆಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸಬೇಕು.  ದೇಶದ ವಿವಿಧೆಡೆಗಳಿಂದ ಜಿಲ್ಲೆಗೆ ಆಗಮಿಸುವ ಸಾಹಿತಿಗಳು, ಕನ್ನಡಪ್ರೇಮಿಗಳು, ಲೇಖಕರು, ಸಾರ್ವಜನಿಕರಿಗೆ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ನಿರ್ವಹಣೆ, ಸೌಲಭ್ಯಗಳು ಸೇರಿದಂತೆ ಇತರೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹಾಗೂ ನಿರ್ವಹಣೆಯ ಕುರಿತ ಮಾಹಿತಿಗಾಗಿ ಗಂಗಾವತಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗುವುದು.  ಅತಿಥಿಗಳಿಗೆ ಶಾಲೆ, ಕಲ್ಯಾಣಮಂಟಪಗಳಲ್ಲಿ ವಾಸ್ತವ್ಯಕ್ಕೆ ಈಗಾಗಲೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.  ಅಲ್ಲದೆ ಗಂಗಾವತಿ ನಗರದಲ್ಲಿ ಕನ್ನಡ ಪ್ರೇಮಿಗಳು ಮನೆ, ಮನೆ ಅತಿಥಿ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಒಲವು ವ್ಯಕ್ತಪಡಿಸಿದ್ದು ಸಂತಸಕರ ಸಂಗತಿಯಾಗಿದೆ.  ಸುಮಾರು ಹತ್ತುಸಾವಿರ ಜನರ ವಾಸ್ತವ್ಯಕ್ಕೆ ಜಿಲ್ಲಾಡಳಿತ ವ್ಯವಸ್ಥೆ ರೂಪಿಸಿದೆ.  ಬೇರೆ ಬೇರೆ ಭಾಗಗಳಿಂದ ಬರುವ ಅತಿಥಿಗಳಿಗೆ ಯಾವುದೇ ಕೊರತೆಯಾಗದಂತೆ ಸೂಕ್ತ ರೀತಿಯಲ್ಲಿ ಉಪಚರಿಸಬೇಕಾದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ.  ಮೆರವಣಿಗೆಯಲ್ಲಿ ಬೇರೆ ಜಿಲ್ಲೆಯ ಕಲಾವಿದರು, ಸ್ಥಳೀಯರು ಸೇರಿದಂತೆ ಸುಮಾರು ೪೦ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ವೈವಿಧ್ಯಮಯ ಕಾರ್ಯಕ್ರಮಗಳ ರಸದೌತಣವನ್ನು ಉಣಬಡಿಸಲಿವೆ.  ಕಲಾವಿದರಿಗೆ ಮೆರವಣಿಗೆಯ ನಂತರ ಸೂಕ್ತ ಗೌರವ ಸಂಭಾವನೆಯನ್ನು ಸಮರ್ಪಕ ರೀತಿಯಲ್ಲಿ ವಿತರಿಸಲು ಹಾಗೂ ಅವರಿಗೆ ಊಟ, ವಸತಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು.   ಸಾರ್ವಜನಿಕರು, ಅತಿಥಿಗಳಿಗೆ ಒದಗಿಸಲಾಗುವ ಊಟದ ವ್ಯವಸ್ಥೆ ಅತ್ಯಂತ ಉತ್ತಮವಾಗಿರಬೇಕು.  ಊಟದ ವ್ಯವಸ್ಥೆಯಲ್ಲಿ ಶುಚಿತ್ವ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು.  ಊಟದ ತಯಾರಿಕೆ, ಗುಣಮಟ್ಟ ಕುರಿತಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
  ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಪ್ರತಿ ಶಿಫ್ಟ್‌ಗೆ ತಲಾ ೧೦೦೦ ಜನರಂತೆ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದು, ಈಗಾಗಲೆ ಜಿಲ್ಲೆಯ ಶಿಕ್ಷಕರನ್ನು ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ.  ಸಮ್ಮೇಳನದ ಅವಧಿಯಲ್ಲಿ ವೇದಿಕೆಯ ಬಳಿ ಜನಸಂದಣಿಯನ್ನು ನಿಯಂತ್ರಿಸಲು ಪ್ರತ್ಯೇಕವಾಗಿ ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು.  ಶಾಲೆಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಪ್ರತಿ ೭ ರಿಂದ ೮ ಶಾಲೆ, ಕಲ್ಯಾಣಮಂಟಪಗಳಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಲಾಗುವುದು.  ಅಲ್ಲದೆ ಶಿಕ್ಷಕರನ್ನು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ನೇಮಕ ಮಾಡಲಾಗುವುದು.  ಸಮ್ಮೇಳನ ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ವಾಹನಗಳು ಸಾಕಾಗುವುದಿಲ್ಲವಾದ್ದರಿಂದ, ಬೇರೆ ಬೇರೆ ಜಿಲ್ಲೆಯ ವಾಹನಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಅಲ್ಲದೆ ಟೆಂಡರ್ ಮೂಲಕವೂ ಖಾಸಗಿ ವಾಹನಗಳನ್ನು ಪಡೆಯಲು ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
  ಸಮ್ಮೇಳನದ ಮುನ್ನಾ ದಿನ ಹಾಗೂ ಸಮ್ಮೇಳನ ನಡೆಯುವ ಅವಧಿಯಲ್ಲಿ ವೇದಿಕೆ ಸೇರಿದಂತೆ ಇಡೀ ಗಂಗಾವತಿ ನಗರವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಯಿತು.  ಸಮ್ಮೇಳನ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ವೇದಿಕೆಯ ಬಳಿ ಸಾಕಷ್ಟು ಸಂಖ್ಯೆಯಲ್ಲಿ ತಜ್ಞ ವೈದ್ಯರು, ಅಗತ್ಯ ಔಷಧೋಪಚಾರದ ವ್ಯವಸ್ಥೆ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.  ಅಗ್ನಿಶಾಮಕ ದಳದವರು ಕನಿಷ್ಟ ಎರಡು ಅಗ್ನಿಶಾಮಕ ವಾಹನಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಇದೇ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್,ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅನ್ನದಾನಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ, ಸೇರಿದಂತೆ ಎಲ್ಲಾ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Wednesday, November 9, 2011

ಗಂಗಾವತಿ ಸಮ್ಮೇಳನಾಧ್ಯಕ್ಷರಾಗಿ ಸಿಪಿಕೆ ಆಯ್ಕೆ




"ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತ ವಿದ್ವತ್ತಿನ ಮಹಾಸಾಗರ ಡಾ. ಸಿ.ಪಿ. ಕೃಷ್ಣಕುಮಾರ್



ಸಿಪಿಕೆ - ಒಂದು ಪರಿಚಯ

"ಸಿಪಿಕೆ ಒಬ್ಬ ಬಹುಶ್ರುತರು. ಅವರ ಭಾಷಾ ಪಾಂಡಿತ್ಯ ಕನ್ನಡ ಇಂಗ್ಲೀಷ್ ಸಂಸ್ಕೃತಗಳದ್ದು. ಹಳಗನ್ನಡ, ನಡುಗನ್ನಡಗಳಲ್ಲಿ ಅವರಿಗೆ ಸಮಾನ ಪ್ರವೇಶ. ಛಂದಸ್ಸು, ಸಾಂಸ್ಕೃತಿಕ ಚರಿತ್ರೆ, ಶಾಸನಶಾಸ್ತ್ರ, ವಿಮರ್ಶೆ, ಭಾಷಾಂತರ, ಜಾನಪದ ಮುಂತಾದ ಸಂಬಂಧಿ ವಿಷಯಗಳಲ್ಲಿ ಏಕಪ್ರಕಾರವಾದ ಪರಿಣಿತಿ, ಜೊತೆಗೆ ಕವಿ. ಈ ಎಲ್ಲದರ ರಸಪಾಕ ಸಿಪಿಕೆ". ಹೌದು, ಇದು ಅಕ್ಷರಶಃ ಸತ್ಯ.
"ಸಿಪಿಕೆ" ಎಂಬ ಮೂರಕ್ಷರ ಮಾತ್ರದಿಂದಲೇ ಕನ್ನಡ ಸಾರಸ್ವತ ಲೋಕದ ಉದ್ದಗಲಕ್ಕೂ ಹೆಸರಾಗಿರುವ ಡಾ. ಸಿ.ಪಿ. ಕೃಷ್ಣಕುಮಾರ್ ಅವರ ಬಗ್ಗೆ ಸಾಹಿತ್ಯ ದಿಗ್ಗಜ ಹಾ.ಮಾ.ನಾ. ಅವರು ಹೇಳಿರುವ ಮೇಲಿನ ಮಾತುಗಳಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಅಂಥ ದೈತ್ಯ ಪ್ರತಿಭೆ ಇವರದು. ನಾಡೋಜ ದೇಜಗೌ ಮಾತಿನಲ್ಲಿ ಹೇಳುವುದಾದರೆ "ಸಿಪಿಕೆಯವರಂಥ ಕವಿಗಳು, ವಿದ್ವಾಂಸರು, ವಿಮರ್ಶಕರು ಜಗತ್ತಿನ ಯಾವ ಭಾಷೆಗಾದರೂ, ಯಾವ ವಿಶ್ವವಿದ್ಯಾನಿಲಯ ಕ್ಕಾದರೂ ಭೂಷಣವಾಗಬಲ್ಲವರು".
೧೯೩೯ ರ ಏಪ್ರಿಲ್ ೮ ರಂದು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿಯ ಚಿಕ್ಕನಾಯಕನಹಳ್ಳಿಯಲ್ಲಿ ಪುಟ್ಟೇಗೌಡ ಮತ್ತು ಚಿಕ್ಕಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಸಿಪಿಕೆಯವರು ಬಾಲ್ಯದಿಂದಲೂ ಸರಸ್ವತಿ ಪುತ್ರರೇ. ತಂದೆ ಸರ್ಕಾರಿ ಕೆಲಸದಲ್ಲಿದ್ದು ಸರ್ವೇಯರ್ ಆಗಿದ್ದು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಿದ್ದರಿಂದ ಮತ್ತು ತಾಯಿಯ ಅಕಾಲ ಮರಣದಿಂದಾಗಿ ಮಗುವಿನಿಂದಲೂ ಅಜ್ಜಿ ಹಾಗೂ ಸೋದರತ್ತೆಯ ಮಡಿಲಲ್ಲಿ ಬೆಳೆದದ್ದೇ ಹೆಚ್ಚು.
ಗ್ರಾಮೀಣ ಪರಿಸರದ ರೈತ ಕುಟುಂಬದಲ್ಲಿ ಅರಳಿದ ಸಿ.ಪಿ.ಕೆ.ಯವರು ಖಾಸಗಿಯಾಗಿ ಲೋಯರ್ ಸೆಕೆಂಡರಿಯನ್ನೂ, ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದ ವಿಜ್ಞಾನದ ವಿದ್ಯಾರ್ಥಿಯಾಗಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದರು. ತಂದೆಯಿಂದ ಆಂಗ್ಲ ಭಾಷೆಯಲ್ಲಿ ಆಗಲೇ ಪರಿಣಿತಿ ಸಾಧಿಸಿದ್ದ ಇವರು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೆ ಪಠ್ಯಪುಸ್ತಕದಲ್ಲಿದ್ದ ಇಂಗ್ಲೀಷ್ ಕವನವೊಂದನ್ನು ಕನ್ನಡಕ್ಕೆ ಅಚ್ಚುಕಟ್ಟಾಗಿ ಅನುವಾದಿಸಿ ಭೇಷ್ ಎನಿಸಿಕೊಂಡಿದ್ದರು. ಶಿವಮೊಗ್ಗದಲ್ಲಿ ಇಂಟರ್ ಮೀಡಿಯಟ್ ಕಾಲೇಜಿಗೆ ಸೇರಿದ ಇವರು ಓದುವಾಗಲೇ ಓದಿನೊಡನೆ ಸಾಹಿತ್ಯದತ್ತ ಆಸಕ್ತಿಯನ್ನು ಬೆಳೆಸಿಕೊಂಡೇ ೧೯೬೦ ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿ ಬಿ.ಎ. ಆನರ್ಸ್ ಪದವಿ ಗಳಿಸಿದರು.
ಭಾರತೀಯ ವಿದ್ಯಾಭವನದ ’ಸಂಸ್ಕೃತ ಕೋವಿದ’ ಪದವಿಯನ್ನೂ ಪಡೆದ ಸಿಪಿಕೆ ೧೯೬೧ ರಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯಲ್ಲಿ ಕನ್ನಡ ಎಂ.ಎ. ಪದವಿ ಪಡೆದದ್ದೇ ತಡ ಕಲಿತ ವಿ.ವಿ.ಯಲ್ಲೇ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ೧೯೬೭ ರಲ್ಲಿ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ, ೧೯೬೯ ರಲ್ಲಿ ಕನ್ನಡ ವಿಭಾಗದ ಪ್ರವಾಚಕರಾಗಿ, ೧೯೮೯ ರಿಂದ ೧೯೯೧ ರವರೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ಇದೆಲ್ಲದರ ನಡುವೆಯೇ ಸಾಹಿತ್ಯ ಕೃಷಿಯನ್ನೂ ಅವಿರತವಾಗಿ ಮಾಡುತ್ತಾ ಮೈಸೂರು ವಿ.ವಿ.ಯ ಶಿಕ್ಷಣ ಮಂಡಳಿ ಮತ್ತು ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿ ೧೯೯೯ ರಲ್ಲಿ ನಿವೃತ್ತಿ ಹೊಂದಿದರು. ಆನಂತರವೂ ಇವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಸಹ ಕೆಲವು ವರ್ಷಗಳು ಸೇವೆ ಸಲ್ಲಿಸಿ ತಾವು ಅಲಂಕರಿಸಿದ್ದ ಪೀಠದ ಘನತೆಯನ್ನು ಹೆಚ್ಚಿಸಿದ್ದರು.
ಡಾ. ಹಾ.ಮಾ.ನಾ. ರಂಥ ವಿದ್ವಾಂಸರ ಮಾರ್ಗದರ್ಶನದಲ್ಲಿ "ನಾಗವರ್ಮನ ಕರ್ನಾಟಕ ಕಾದಂಬರಿ ಒಂದು ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ" ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ (೧೯೭೮) ಸಂಶೋಧನಾ ಕ್ಷೇತ್ರಕ್ಕೊಂದು ಮಹತ್ತರ ಕಾಣಿಕೆ ನೀಡಿ ಡಾಕ್ಟರೇಟ್ ಪಡೆದ ಸಿಪಿಕೆಯವರು ಬದುಕಿನುದ್ದಕ್ಕೂ ಬರೆಯುತ್ತಲೇ ಬಂದಿದ್ದಾರೆ. ವಿದ್ಯಾರ್ಥಿಜೀವನ ಮತ್ತು ವೃತ್ತಿಜೀವನಗಳೆರಡರಲ್ಲೂ ಕುವೆಂಪು, ದೇಜಗೌ, ಜಿಎಸ್ಸೆಸ್, ಸುಜನಾ, ಹಾಮಾನಾ, ತೀನಂಶ್ರೀ, ಯು.ಆರ್. ಅನಂತಮೂರ್ತಿ ಮುಂತಾದವರ ಗರಡಿಯಲ್ಲಿ ಸಾಹಿತ್ಯದ ತಾಲೀಮು ಮಾಡುತ್ತಲೇ ಸಾಗಿಬಂದ ಸಿಪಿಕೆ ಸಾಹಿತ್ಯ ಶಿಖರವಾಗಿ ರೂಪುಗೊಂಡವರು. ಕನ್ನಡ ಸಾರಸ್ವತ ಲೋಕದಲ್ಲಿ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಸೃಷ್ಠಿಸಿರುವ ಇವರು "ತಾರಾಸಖ" ಕವನ ಸಂಕಲನದ ಮೂಲಕ ೧೯೭೦ ರಲ್ಲಿ ಸಾರಸ್ವತ ಲೋಕ ಪ್ರವೇಶಿಸಿ ಅನಂತಪೃಥ್ವಿ, ಪ್ರಕೃತಿ, ಬೊಗಸೆ, ವರ್ತಮಾನ ಮುಂತಾದ ಕವನ ಸಂಕಲನಗಳು ಸೇರಿದಂತೆ ಕಾವ್ಯದ ವಿವಿಧ ಪ್ರಕಾರಗಳಲ್ಲಿ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿ ತಮ್ಮ ಸೃಜನಶೀಲ ಪ್ರತಿಭೆಯನ್ನು ಮೆರೆಸಿದ್ದಾರೆ. ಕವನ, ಹನಿಗವನ, ವಚನ, ಚುಟುಕು, ಮುಕ್ತಕ, ಖಂಡಕಾವ್ಯ, ಸುನೀತ..... ಹೀಗೆ ಎಲ್ಲದರಲ್ಲೂ ಇವರು ಎತ್ತಿದ ಕೈ! ಮುಕ್ತಕ ಪ್ರಕಾರಕ್ಕೆ ಸುಮಾರು ಮುಕ್ಕಾಲು ಸಾವಿರ ಪದ್ಯಗಳನ್ನು ಕೊಡುಗೆಯಾಗಿ ನೀಡಿರುವ ಇವರು "ಅಂತರತಮ"ದಲ್ಲಿ ಎಂಟುನೂರು ಸೂಕ್ತಿಗಳನ್ನು ಹೆಣೆದಿದ್ದಾರೆ. ಚೋದ್ಯ ಕುಚೋದ್ಯ, ಹನಿಮಿನಿ, ಸಿಪಿಕೆ ಚುಟುಕುಗಳು ಮುಂತಾದ ಇವರ ಹನಿಗವನ ಕೃತಿಗಳು ಕಾವ್ಯಲೋಕಕ್ಕೆ ಹೊಸ ಮಿಂಚನ್ನು ತಂದಿತ್ತಿವೆ. ಆಧುನಿಕ ವಚನಗಳ ರಚನೆಯಲ್ಲೂ ಸಾಕಷ್ಟು ಕೃಷಿಗೈದಿರುವ ಸಿಪಿಕೆಯವರು ವಚನ, ಹನಿಗವನ, ಮುಕ್ತಕ, ಚುಟುಕುಗಳ ಪ್ರಕಾರದಲ್ಲಿ ಸುಮಾರು ನಾಲ್ಕು ಸಾವಿರ ಹನಿಗವಿತೆಗಳನ್ನು ರಚಿಸಿ ಈ ದಿಶೆಯಲ್ಲಿ ದಾಖಲೆಯನ್ನೇ ನಿರ್ಮಿಸಿದ್ದಾರೆ. ಇವರ "ಸುನೀತ ಶತಕ" ದಂತಹ ಖಂಡಕಾವ್ಯ ಕೃತಿಗಳು ಕಾವ್ಯಲೋಕದಲ್ಲಿ ವಿಶೇಷವೆನಿಸಿವೆ.
ಸಿಪಿಕೆಯವರು ಕಾವ್ಯದಲ್ಲೆಂತೋ ಹಾಗೆಯೇ ಸಾಹಿತ್ಯ ವಿಮರ್ಶೆಯಲ್ಲೂ ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿಚಾರ ವಿಮರ್ಶೆ, ಸಂಶೋಧನೆ, ಜಾನಪದ ವಿಷಯಗಳಲ್ಲಿ ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರತಂದು ತಮ್ಮ ವಸ್ತುನಿಷ್ಟ ದೃಷ್ಟಿಯನ್ನು ಪೂರ್ವಗ್ರಹವಿಲ್ಲದೆ ಇಲ್ಲಿ ದಾಖಲಿಸಿದ್ದಾರೆ. ಪಂಪ, ರನ್ನ, ಜನ್ನ, ನಾಗಚಂದ್ರರ ಕೃತಿಗಳಾದಿಯಾಗಿ ಹಳಗನ್ನಡ ಸಾಹಿತ್ಯವನ್ನು ಅರೆದು ಕುಡಿದಂಥ ಪಾಂಡಿತ್ಯದ ವಿಮರ್ಶೆಯ ಲೇಖನಿ ಇವರದ್ದು. ಕಾವ್ಯಾರಾಧನೆ, ಕಾವ್ಯ ವಿವೇಕ ಇವರ ವಿಮರ್ಶೆಯ ಕೋಲ್ಮಿಂಚುಗಳಾಗಿವೆ. ನೂರಾರು ವಿಮರ್ಶೆ, ಮುನ್ನುಡಿಮಾಲೆ, ಕನ್ನಡ ಕಾವ್ಯ ಹತ್ತು ವರ್ಷ ಕೃತಿಗಳು ಇವರ ವಿಮರ್ಶಾ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ. ಐವತ್ತಕ್ಕೂ ಹೆಚ್ಚು ವಿಮರ್ಶಾ ಕೃತಿಗಳು ಸಿಪಿಕೆಯವರ ಸಾಹಿತ್ಯ ಭಂಡಾರದಲ್ಲಿವೆಯೆಂದರೆ ಇದೇನೂ ಸಾಮಾನ್ಯ ಸಾಧನೆಯಲ್ಲ.
ಸಂಶೋಧನಾ ಕ್ಷೇತ್ರದಲ್ಲಿ ಇವರು ಅಸಾಮಾನ್ಯರೆನಿಸಿದ್ದು ಇವರ "ಶೋಧನೆ" ಯಂಥ ಹಲವು ಹತ್ತು ಕೃತಿಗಳು ಇದನ್ನು ಸಾಕ್ಷೀಕರಿಸುತ್ತವೆ. ಹಾಗೆಯೇ ಗ್ರಂಥ ಸಂಪಾದನೆಯಲ್ಲೂ ಇವರದು ಅನನ್ಯ ಕೊಡುಗೆ. ಅದನ್ನು ಇವರ "ಅರಣ್ಯಪರ್ವ ವೇ ಹೇಳುತ್ತದೆ. ಅಂತೆಯೇ ಅನುವಾದದಲ್ಲೂ ಅಪೂರ್ವ ಸಾಧನೆ ಮಾಡಿರುವ ಸಿಪಿಕೆ ಅವರ ಭಾಷಾಂತರ ಸಾಹಿತ್ಯದ ಸಾಮರ್ಥ್ಯವನ್ನು ಅವರ ಜೈನಕವಿ ವಾದಿರಾಜನ ಯಶೋಧರಚರಿತೆ, ಸಂಸ್ಕೃತ ಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲಾ, ಕನ್ನಡ ಸೌಂದರ್ಯಲಹರಿ, ರಾಮಾಯಣ ಬಾಲಕಾಂಡ ಸಂಗ್ರಹ, ಮಹಾಭಾರತ ಸಂಗ್ರಹ, ಠಾಕೂರರ ವಚನಾಂಜಲಿ..... ಮುಂತಾದ ಕೃತಿಗಳೇ ಸಾರಿ ಹೇಳಬಲ್ಲವು. ಎಲಿಯೆಟ್, ಟಾಲ್‌ಸ್ಟಾಯ್‌ರ ಕೃತಿಗಳನ್ನು ಇವರು ಭಾಷಾಂತರಿಸಿರುವುದಲ್ಲದೆ, ಗ್ರೀಕ್ ನಾಟಕಕಾರರ ಹೆಲೆನ್, ಮೀಡಿಯಾ, ಹಿಪ್ಪೋಲಿಟಸ್ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸಿಪಿಕೆಯನ್ನು ಭಾಷಾಂತರ ಸಾಹಿತ್ಯದ ಸಾರ್ವಭೌಮನೆಂದು ಸಾರಸ್ವತ ಲೋಕ ಕರೆಯುವುದುಂಟು.
ಜೀವನ ಚರಿತ್ರೆಗಳ ರಚನೆಯುಲ್ಲೂ ಇವರ ಲೇಖನಿ ಅದ್ವಿತೀಯವೇ ಆಗಿದೆ. ಹಿರಿಯರ ಗೆರೆಗಳು, ಸ್ವಾಮಿ ವಿವೇಕಾನಂದ, ಸಾಕ್ರೆಟಿಸ್, ರತ್ನತ್ರಯ, ಶ್ರೀರಾಮಕೃಷ್ಣ ಮತ್ತು ಯುಗಧರ್ಮ ಕೃತಿಗಳು ಇದನ್ನು ಸಾಬೀತುಪಡಿಸುತ್ತವೆ. ಅಂತೆಯೇ ಅದ್ಭುತ ಪ್ರಬಂಧಕಾರರಾಗಿಯೂ ಸಿಪಿಕೆ ಹೆಸರಾಗಿದ್ದು ಮೆಲುಕು, ಚಿಂತನಬಿಂದು, ಕೋಲ್ಮಿಂಚು, ಬಿಗು-ಲಘು, ದೀಪಸ್ಮಿತ, ಜಾಜಿಮಲ್ಲಿಗೆ, ಹವಳ ಸೇರಿದಂತೆ ಇವರ ಹದಿನೈದಕ್ಕೂ ಹೆಚ್ಚು ಪ್ರಬಂಧ ಕೃತಿಗಳು ಇವರ ಪ್ರಚಂಡ ಪ್ರತಿಭೆಗೆ ಪ್ರಭಾವಳಿ ಇಟ್ಟಿವೆ. ಒಟ್ಟಾರೆ ಸಾಹಿತ್ಯದ ಬಹುಪಾಲು ಎಲ್ಲಾ ಪ್ರಕಾರಗಳನ್ನೂ ತಮ್ಮ ಲೇಖನಿಯಿಂದ ಹಿಡಿದಿಟ್ಟು ಕೃತಿಗಳ ರಾಶಿಯನ್ನು ಕನ್ನಡಮ್ಮನ ಮಡಿಲಿಗೆ ತುಂಬಿರುವ ಡಾ. ಸಿಪಿಕೆಯವರು ನಿಜಕ್ಕೂ ಸಾರಸ್ವತ ಲೋಕದ ಸವ್ಯಸಾಚಿ.
೧೯೬೦ ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಬಿಎಂಶ್ರೀ ಅವರ ರಜತೋತ್ಸವ ಸುವರ್ಣ ಪದಕ, ೧೯೮೮ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ೧೯೯೪ ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಜಾನಪದತಜ್ಞ ಪ್ರಶಸ್ತಿ, ೧೯೯೬ ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ೨೦೦೩ ರಲ್ಲಿ ರಮಣಶ್ರೀ ಪ್ರಶಸ್ತಿ, ಶರಣಶ್ರೀ ಪ್ರಶಸ್ತಿ, ಚಿ.ನ. ಮಂಗಳ ಪ್ರಶಸ್ತಿ, ವಿದ್ವತ್ ಶಿರೋಮಣಿ ಪ್ರಶಸ್ತಿ, ೨೦೦೯ ರಲ್ಲಿ ವಿಶ್ವಮಾನವ ಕುವೆಂಪು ಪ್ರಶಸ್ತಿ, ೨೦೧೦ ರಲ್ಲಿ ಎಚ್.ಎಲ್. ನಾಗೇಗೌಡ ಪ್ರಶಸ್ತಿಗಳು ಸೇರಿದಂತೆ ನಾಡಿನ ನೂರಾರು ಪ್ರಶಸ್ತಿ-ಪುರಸ್ಕಾರಗಳು, ಸನ್ಮಾನ-ಗೌರವಗಳು, ಬಿರುದು-ಬಾವಲಿಗಳು ಸಿಪಿಕೆಯವರ ಸಾಧನೆಯ ಕೊರಳನ್ನು ಅಲಂಕರಿಸಿವೆ. ’ಸಾರ್ಥಕ’ ಎಂಬ ಬೃಹತ್ ಅಭಿನಂದನಾ ಗ್ರಂಥ ಕೂಡ ಇವರ ಸಾಹಿತ್ಯ ಕೃಷಿಗೆ ಸಂದಿದೆ. ಅಂತೆಯೇ ಕನ್ನಡ ಸಾಹಿತ್ಯ ಪರಿಷತ್ತು ತನ್ನ ವಜ್ರಮಹೋತ್ಸವದಲ್ಲಿ ಸಿಪಿಕೆ ಅವರನ್ನು ಸನ್ಮಾನಿಸಿದೆಯಲ್ಲದೆ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನಕ್ಕೂ ಇವರು ಪಾತ್ರರಾಗಿದ್ದಾರೆ. ಇದೀಗ ಇವೆಲ್ಲಕ್ಕೂ ಚಿನ್ನದ ಪ್ರಭಾವಳಿಯಿಟ್ಟಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಕರ್ನಾಟಕದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಪ್ರಸ್ತುತ ಸಾಲಿನ ಪ್ರತಿಷ್ಠಿತ "ನೃಪತುಂಗ ಸಾಹಿತ್ಯ ಪ್ರಶಸ್ತಿ"ಗೆ ಭಾಜನರಾಗಿದ್ದಾರೆ.
ಬಹಳ ಹಿಂದೆಯೇ ಮಹಾಕವಿ ಡಾ. ಪುತಿನ ಹೇಳಿರುವಂತೆ "ಗಟ್ಟಿ ಆಲೋಚನೆಗಳುಳ್ಳ ಅತ್ಯಮೂಲ್ಯವಾದ ಸಾಹಿತ್ಯ ಭಂಡಾರವನ್ನೇ ಕನ್ನಡಕ್ಕೆ ನೀಡಿರುವ ಡಾ. ಸಿಪಿಕೆ ಅವರಂಥವರು ನಮ್ಮೊಡನಿರುವುದು ನಾಡುನುಡಿಯ ಮಹಾಭಾಗ್ಯ. ಈ ಮಹಾಚೇತನಕ್ಕೆ ನಾಡಿನ, ರಾಷ್ಟ್ರದ ಸಾಹಿತ್ಯ ಲೋಕದ ಅತ್ಯುನ್ನತ ಗೌರವಗಳು ದೊರೆಯುವಂತಾಗಲಿ ಎಂಬುದೇ ಜನಕೋಟಿಯ ಹಾರೈಕೆ".

                            ಬನ್ನೂರು ಕೆ. ರಾಜು              ಕೃಪೆ: ಕರವೇ ನಲ್ನುಡಿ