78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Tuesday, November 22, 2011

ಸಾಹಿತ್ಯ ಸಮ್ಮೇಳನ : ಪರಿಷತ್‌ನವರೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ- ತುಳಸಿ ಮದ್ದಿನೇನಿ



ಕೊಪ್ಪಳ ನ.   : ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಡಿಸೆಂಬರ್ ೯, ೧೦ ಮತ್ತು ೧೧ ರಂದು ಗಂಗಾವತಿಯಲ್ಲಿ ಜರುಗಲಿದ್ದು, ಎಲ್ಲ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್, ಜನಪ್ರತಿನಿಧಿಗಳು, ಸ್ವಯಂ ಸೇವಕರೊಂದಿಗೆ ಸಮನ್ವಯತೆಯಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಅಖಿಲಬಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಡೀ ದೇಶದ ಜನರಲ್ಲಿ ಚಿರಸ್ಮರಣೀಯವಾಗಿಸಲು ಎಲ್ಲ ಅಧಿಕಾರಿಗಳು ಸಮನ್ವಯತೆಯಿಮದ ಕೆಲಸ ನಿರ್ವಹಿಸಬೇಕು.  ಈಗಾಗಲೆ ಸಾಹಿತ್ಯ ಪರಿಷತ್ ಮೂವತ್ತಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಿದೆ.  ಈ ಸಮಿತಿಯೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತವೂ ಸಹ ಹಲವು ಸಮಿತಿಗಳನ್ನು ರಚಿಸಿದೆ.  ಈ ಎರಡೂ ಸಮಿತಿಗಳು ತಮಗೆ ವಹಿಸಲಾಗಿರುವ ಹೊಣೆಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸಬೇಕು.  ದೇಶದ ವಿವಿಧೆಡೆಗಳಿಂದ ಜಿಲ್ಲೆಗೆ ಆಗಮಿಸುವ ಸಾಹಿತಿಗಳು, ಕನ್ನಡಪ್ರೇಮಿಗಳು, ಲೇಖಕರು, ಸಾರ್ವಜನಿಕರಿಗೆ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ನಿರ್ವಹಣೆ, ಸೌಲಭ್ಯಗಳು ಸೇರಿದಂತೆ ಇತರೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹಾಗೂ ನಿರ್ವಹಣೆಯ ಕುರಿತ ಮಾಹಿತಿಗಾಗಿ ಗಂಗಾವತಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗುವುದು.  ಅತಿಥಿಗಳಿಗೆ ಶಾಲೆ, ಕಲ್ಯಾಣಮಂಟಪಗಳಲ್ಲಿ ವಾಸ್ತವ್ಯಕ್ಕೆ ಈಗಾಗಲೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.  ಅಲ್ಲದೆ ಗಂಗಾವತಿ ನಗರದಲ್ಲಿ ಕನ್ನಡ ಪ್ರೇಮಿಗಳು ಮನೆ, ಮನೆ ಅತಿಥಿ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಒಲವು ವ್ಯಕ್ತಪಡಿಸಿದ್ದು ಸಂತಸಕರ ಸಂಗತಿಯಾಗಿದೆ.  ಸುಮಾರು ಹತ್ತುಸಾವಿರ ಜನರ ವಾಸ್ತವ್ಯಕ್ಕೆ ಜಿಲ್ಲಾಡಳಿತ ವ್ಯವಸ್ಥೆ ರೂಪಿಸಿದೆ.  ಬೇರೆ ಬೇರೆ ಭಾಗಗಳಿಂದ ಬರುವ ಅತಿಥಿಗಳಿಗೆ ಯಾವುದೇ ಕೊರತೆಯಾಗದಂತೆ ಸೂಕ್ತ ರೀತಿಯಲ್ಲಿ ಉಪಚರಿಸಬೇಕಾದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ.  ಮೆರವಣಿಗೆಯಲ್ಲಿ ಬೇರೆ ಜಿಲ್ಲೆಯ ಕಲಾವಿದರು, ಸ್ಥಳೀಯರು ಸೇರಿದಂತೆ ಸುಮಾರು ೪೦ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ವೈವಿಧ್ಯಮಯ ಕಾರ್ಯಕ್ರಮಗಳ ರಸದೌತಣವನ್ನು ಉಣಬಡಿಸಲಿವೆ.  ಕಲಾವಿದರಿಗೆ ಮೆರವಣಿಗೆಯ ನಂತರ ಸೂಕ್ತ ಗೌರವ ಸಂಭಾವನೆಯನ್ನು ಸಮರ್ಪಕ ರೀತಿಯಲ್ಲಿ ವಿತರಿಸಲು ಹಾಗೂ ಅವರಿಗೆ ಊಟ, ವಸತಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು.   ಸಾರ್ವಜನಿಕರು, ಅತಿಥಿಗಳಿಗೆ ಒದಗಿಸಲಾಗುವ ಊಟದ ವ್ಯವಸ್ಥೆ ಅತ್ಯಂತ ಉತ್ತಮವಾಗಿರಬೇಕು.  ಊಟದ ವ್ಯವಸ್ಥೆಯಲ್ಲಿ ಶುಚಿತ್ವ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು.  ಊಟದ ತಯಾರಿಕೆ, ಗುಣಮಟ್ಟ ಕುರಿತಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
  ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಪ್ರತಿ ಶಿಫ್ಟ್‌ಗೆ ತಲಾ ೧೦೦೦ ಜನರಂತೆ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದು, ಈಗಾಗಲೆ ಜಿಲ್ಲೆಯ ಶಿಕ್ಷಕರನ್ನು ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ.  ಸಮ್ಮೇಳನದ ಅವಧಿಯಲ್ಲಿ ವೇದಿಕೆಯ ಬಳಿ ಜನಸಂದಣಿಯನ್ನು ನಿಯಂತ್ರಿಸಲು ಪ್ರತ್ಯೇಕವಾಗಿ ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು.  ಶಾಲೆಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಪ್ರತಿ ೭ ರಿಂದ ೮ ಶಾಲೆ, ಕಲ್ಯಾಣಮಂಟಪಗಳಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಲಾಗುವುದು.  ಅಲ್ಲದೆ ಶಿಕ್ಷಕರನ್ನು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ನೇಮಕ ಮಾಡಲಾಗುವುದು.  ಸಮ್ಮೇಳನ ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ವಾಹನಗಳು ಸಾಕಾಗುವುದಿಲ್ಲವಾದ್ದರಿಂದ, ಬೇರೆ ಬೇರೆ ಜಿಲ್ಲೆಯ ವಾಹನಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಅಲ್ಲದೆ ಟೆಂಡರ್ ಮೂಲಕವೂ ಖಾಸಗಿ ವಾಹನಗಳನ್ನು ಪಡೆಯಲು ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
  ಸಮ್ಮೇಳನದ ಮುನ್ನಾ ದಿನ ಹಾಗೂ ಸಮ್ಮೇಳನ ನಡೆಯುವ ಅವಧಿಯಲ್ಲಿ ವೇದಿಕೆ ಸೇರಿದಂತೆ ಇಡೀ ಗಂಗಾವತಿ ನಗರವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಯಿತು.  ಸಮ್ಮೇಳನ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ವೇದಿಕೆಯ ಬಳಿ ಸಾಕಷ್ಟು ಸಂಖ್ಯೆಯಲ್ಲಿ ತಜ್ಞ ವೈದ್ಯರು, ಅಗತ್ಯ ಔಷಧೋಪಚಾರದ ವ್ಯವಸ್ಥೆ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.  ಅಗ್ನಿಶಾಮಕ ದಳದವರು ಕನಿಷ್ಟ ಎರಡು ಅಗ್ನಿಶಾಮಕ ವಾಹನಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಇದೇ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್,ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅನ್ನದಾನಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ, ಸೇರಿದಂತೆ ಎಲ್ಲಾ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

No comments:

Post a Comment