78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Monday, December 5, 2011

ಶಾಲಾ ಕಾಲೇಜುಗಳಿಗೆ ರಜೆ- ಡಿ.ಸಿ. ಆದೇಶ


ಕೊಪ್ಪಳ ಡಿ.  ): ಗಂಗಾವತಿಯಲ್ಲಿ ನಡೆಯಲಿರುವ ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಭಾಗಗಳಿಂದ ಸಾಹಿತಿಗಳು, ಕಲಾವಿದರು, ಗಣ್ಯಾತಿಗಣ್ಯ ವ್ಯಕ್ತಿಗಳು, ರಾಜಕೀಯ ಮುಖಂಡರು, ಸಾರ್ವಜನಿಕರು ಮುಂತಾದವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ತಾಲೂಕಿನ ಸರ್ಕಾರಿ ಶಾಲಾ/ಕಾಲೇಜುಗಳ ಶಿಕ್ಷಕರು/ಉಪನ್ಯಾಸಕರುಗಳನ್ನು ಸಮ್ಮೇಳನದಲ್ಲಿ ವಿವಿಧ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ. ಶಾಲಾ /ಕಾಲೇಜು ಕಟ್ಟಡಗಳನ್ನು ವಸತಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಶಾಲಾ/ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಗಂಗಾವತಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಡಿ. ೦೮ ರಿಂದ ೧೧ ರವರೆಗೆ  ಹಾಗೂ ಉಳಿದ ೩ ತಾಲೂಕುಗಳ ಎಲ್ಲಾ ಶಾಲಾ ಕಾಲೇಜುಗಳಿಗೆ ಡಿ. ೦೯ ರಿಂದ ೧೧ ರವರೆಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕಾಲೇಜು ಸಿಬ್ಬಂದಿಗೆ ಅನುಮತಿ ನೀಡಲು ಸೂಚನೆ


ಕೊಪ್ಪಳ ಡಿ.   : ಗಂಗಾವತಿ ತಾಲೂಕಿನಲ್ಲಿ ನಡೆಯುತ್ತಿರುವ ೭೮ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸ್ವ ಇಚ್ಛೆಯಿಂದ ಹಾಜರಾಗಬಯಸುವ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜು ಸಿಬ್ಬಂದಿಯವರಿಗೆ ಆಯಾ ಕಾಲೇಜು ಪ್ರಾಂಶುಪಾಲರು ಅನುಮತಿ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ. 
ಇದೇ ಡಿ. ೦೯, ೧೦ ಹಾಗೂ ೧೧ ರಂದು ಗಂಗಾವತಿಯಲ್ಲಿ ಜರುಗಲಿರುವ  ೭೮ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ  ಸ್ವ ಇಚ್ಛೆಯಿಂದ ಹಾಜರಾಗ ಬಯಸುವ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿಪೂರ್ವ ಕಾಲೇಜು ಸಿಬ್ಬಂದಿಯವರಿಗೆ ಅನುಮತಿ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದು,  ಸಮ್ಮೇಳನಕ್ಕೆ ಹಾಜರಾದ ಕುರಿತು ಪ್ರಮಾಣ ಪತ್ರವನ್ನು ಆಯಾ ಸಿಬ್ಬಂದಿಯವರು ಪಡೆದು ತರುವಂತೆ ಸೂಚನೆ ನೀಡಿದ್ದಾರೆ.

ಕೊಪ್ಪಳ ಸಾರಿಗೆ ಸಂಸ್ಥೆ ನೌಕರರಿಂದ ೩. ೨೬ ಲಕ್ಷ ರೂ. ವಂತಿಗೆ


ಕೊಪ್ಪಳ ಡಿ.  ಇದೇ ಡಿ. ೯ ರಿಂದ ೧೧ ರವರೆಗೆ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ಅಧಿಕಾರಿ, ನೌಕರರ ವಂತಿಗೆ ೩. ೨೬ ಲಕ್ಷ ರೂ.ಗಳ ಡಿ.ಡಿ. ಯನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ. ಬಸವರಾವ್ ಅವರು ಸಮ್ಮೇಳನದ ಕೋಶಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಹಸ್ತಾಂತರಿಸಿದರು.
  ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಬಸವರಾವ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗಂಗಾವತಿಯಲ್ಲಿ ನಡೆಯಲಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಾರಿಗೆ ಸಂಸ್ಥೆಯ ನೌಕರರು ತಮ್ಮ ವೇತನದಲ್ಲಿ ವಂತಿಗೆಯ ಮೊತ್ತವನ್ನು ಕಡಿತಗೊಳಿಸಿ, ಕನ್ನಡಾಂಬೆಯ ತೇರು ಎಳೆಯಲು ತಮ್ಮ ಸಹಕಾರವನ್ನು ಸೂಚಿಸಿದ್ದಾರೆ.  ಸಮ್ಮೇಳನ ಯಶಸ್ವಿಗೊಳಿಸುವ ಸದಾಶಯ ನಮ್ಮದಾಗಿದೆ ಎಂದರು.
  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ವಂತಿಗೆಯನ್ನು ಸ್ವೀಕರಿಸಿ ಮಾತನಾಡಿ, ಸಮ್ಮೇಳನಕ್ಕಾಗಿ ಸಾರಿಗೆ ಸಂಸ್ಥೆಯ ಅಧಿಕಾರಿ, ನೌಕರರು ತಮ್ಮ ದೇಣಿಗೆ ಸಲ್ಲಿಸಿರುವುದು ಶ್ಲಾಘನೀಯವಾಗಿದೆ.  ಹಾಗೂ ಇತರರಿಗೂ ಇದು ಪ್ರೇರಣೆ ನೀಡಲಿದೆ ಎಂದು ಬಣ್ಣಿಸಿದರು.
  ಈಶಾನ್ಯ ಕರ್ನಾಟಕಲ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ಸಂಚಾರ ಅಧಿಕಾರಿ ವಿವೇಕಾನಂದ, ಸಹಾಯಕ ಲೆಕ್ಕಾಧಿಕಾರಿ ಎನ್.ವಿ. ಉಪಾಧ್ಯಾಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
78ne akhila bharat kannada sahitya sammelana gangavathi

Sunday, December 4, 2011

ಸಮರ್ಥ ಜವಾಬ್ದಾರಿ ನಿಭಾಯಿಸಿ, ಸಮ್ಮೇಳನ ಯಶಸ್ವಿಗೊಳಿಸಿ: ಪರಣ್ಣ



ಗಂಗಾವತಿ, ಡಿ.4: ನಗರದಲ್ಲಿ ನಡೆ ಯುವ 78ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತಿಗಳು, ಅತಿಥಿಗಳಿಗೆ ಉತ್ತಮ ಆತಿಥ್ಯ ನೀಡಿ, ಸಮರ್ಥ ಜವಾಬ್ದಾರಿ ನಿಭಾಯಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಶಾಸಕ ಪರಣ್ಣ ಮುನವಳ್ಳಿ ಕರೆ ನೀಡಿದರು.

ರವಿವಾರ ಸಮ್ಮೇಳನದ ಸ್ವಾಗತ ಕಾರ್ಯಾಲಯದಲ್ಲಿ ನಡೆದ ಸರ್ವ ಸಮಿತಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಸಾಹಿತಿಗಳು, ಗಣ್ಯರು ಆಗಮಿಸಲಿದ್ದು, ಜವಾಬ್ದಾರಿ ಹೊತ್ತಿರುವ ಸಮಿತಿ ಸದಸ್ಯರು ತಮ್ಮ ತಮ್ಮ ಕರ್ತವ್ಯವನ್ನು ವಿನಯದಿಂದ ಮತ್ತು ಸೌಜನ್ಯತೆಯಿಂದ ನಿಭಾಯಿಸಬೇಕು ಹಾಗೂ ಊಟ, ವಸತಿ, ಕುಡಿಯುವ ನೀರು ಸೇರಿದಂತೆ ಇತರ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಸಂಸದ ಶಿವರಾಮೇಗೌಡ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ, ಎನ್. ಸೂರಿಬಾಬು, ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ಮಲ್ಲನಗೌಡ, ನೂತನಕುಮಾರ, ಎಸ್.ಬಿ.ಪಾಟೀಲ್, ದುರ್ಗಾ ದಾಸ್ ಬಂಡಾರ್ಕರ್, ಬಸವರಾಜ ಕೋಟಿ, ವಾರ್ತಾಧಿಕಾರಿ ಬಿ.ತುಕಾರಾಂ, ವೀರಭದ್ರಪ್ಪ ನಾಯಕ, ಸಿ.ಜಿ.ಜವಳಿ, ಕವಿತಾ ಗುರುಮೂರ್ತಿ, ರೇಣುಕಾ ಆವೂಲ್, ಬಸವರಾಜ ರಹಮತ್ ನಾಳ, ಅಮರಜ್ಯೋತಿ ದುರುಗಪ್ಪ, ದೊಡ್ಡಬಸಪ್ಪ ನೀರಲಕೇರಿ, ಅಮರೇಶ ಕುಳಗಿ, ಎಸ್.ಬಿ.ಗೊಂಡಬಾಳ, ಅರಳಿ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ವೈವಿಧ್ಯಮಯ ಕಲಾ ತಂಡಗಳು



ಕೊಪ್ಪಳ ಡಿ.  ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಡಿ. ೯ ರಂದು ಏರ್ಪಡಿಸಲಾಗಿರುವ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ.
  ವೈವಿಧ್ಯಮಯ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆ ಡಿ. ೯ ರಂದು ಬೆಳಿಗ್ಗೆ ೮-೩೦ ಗಂಟೆಗೆ ನಗರದ ಸಾಯಿಬಾಬ ಮಂದಿರದಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮೂಲಕ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯನ್ನು ತಲುಪಲಿದೆ.  ಮೆರವಣಿಗೆಯಲ್ಲಿ ಭಾಗವಹಿಸಲಿರುವ ಕಲಾ ತಂಡಗಳ ವಿವರ ಇಂತಿದೆ.  ಮೈಸೂರಿನ ಮಹಾದೇವ ಮತ್ತು ತಂಡದಿಂದ ನಂದಿಧ್ವಜ ಕುಣಿತ, ತುಮಕೂರಿನ ಎಚ್.ಎನ್. ಗಿರೀಶ್ ಹುಲಿಕಲ್ ಅವರಿಂದ ಸೋಮನಕುಣಿತ, ಮೇಲುಕೋಟೆಯ ಎನ್.ಆರ್. ರವೀಂದ್ರ ಅವರ ಪಟ ಕುಣಿತ, ಮಂಡ್ಯದ ಸಿದ್ದೇಗೌಡ ಮತ್ತು ತಂಡದಿಂದ ಗಾರುಡಿ ಬೊಂಬೆ ಕುಣಿತ, ನಂಜನಗೂಡಿನ ಸತೀಶ್ ಮತ್ತು ತಂಡದಿಂದ ಕಂಸಾಳೆ ನೃತ್ಯ, ಹೆಗ್ಗೋಡು ಶಿವಮೊಗ್ಗ ಜಿಲ್ಲೆ ವನಿತಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ಚಿಕ್ಕಮಗಳೂರಿನ ಫಣಿಯಮ್ಮ ತಂಡದಿಂದ ಮಹಿಳಾ ವೀರಗಾಸೆ, ಮಂಡ್ಯದ ದೇವರಾಜ ಮತ್ತು ತಂಡದಿಂದ ಪೂಜಾಕುಣಿತ, ಕೋಲಾರದ ಅನಿಲಕುಮಾರ ತಂಡದಿಂದ ಹುಲಿವೇಷ, ಬೆಳಗಾವಿ ಜಿಲ್ಲೆ ಬಸವೇಶ್ವರ ಜಗ್ಗಲಿಗೆ ಮೇಳ ತಂಡದಿಂದ ಜಗ್ಗಲಿಗೆ ಮೇಳ, ಬಾದಾಮಿಯ ಯಲ್ಲಪ್ಪ ಪೂಜಾರಿ ತಂಡದಿಂದ ಖಣಿವಾದನ, ಬಾಗಲಕೋಟೆ ಜಿಲ್ಲೆ ಜಮಖಂಡಿಯ ಶ್ರೀಶೈಲ ಪಟ್ಟಣಶೆಟ್ಟಿ ತಂಡದಿಂದ ಸರೋಳ ವಾದನ, ಬಾಗಲಕೋಟೆ ಜಿಲ್ಲೆ ಸೋಮಶೇಖರ ತಂಡದಿಂದ ವೀರಗಾಸೆ, ಯಸಹಳ್ಳಿಯ ನಾರಾಯಣ ಸೋನಾರ ತಂಡದಿಂದ ಕರಡಿ ಮಜಲು, ಮರಿಯಮ್ಮನಹಳ್ಳಿಯ ಮಂಜಮ್ಮ ತಂಡದಿಂದ ಜೋಗತಿ ಕುಣಿತ, ಬೆಳಗಾವಿ ಜಿಲ್ಲೆಯ ಬೆನ್ನೂರು ತಂಡದಿಂದ ಕೋಲಾಟ, ಕರ್ನಾಟಕ ಜನಪದ ಕಲಾ ಸಂಸ್ಥೆಯಿಂದ ದಟ್ಟಿ ಕುಣಿತ, ಶಿವಮೊಗ್ಗ ಜಿಲ್ಲೆ ಯಲ್ಲಪ್ಪ ಭಾವತ ತಂಡದಿಂದ ದೇವಿಪಾತ್ರ, ಮಹೇಶಪ್ಪ ತಂಡದಿಂದ ತಮಟೆ ಮೇಳ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಂಡದಿಂದ ಸಾರೋಟು ಮೆರವಣಿಗೆ, ಕಂಪ್ಲಿ ತಂಡದಿಂದ ತಾಶರಂ ಡೋಲು, ಯಲಬುರ್ಗಾದ ರೇವಣಪ್ಪ ತಂಡದಿಂದ ಡೊಳ್ಳು ಕುಣಿತ, ತಾವರಗೇರಾದ ಅಜಮೀರ್ ತಂಡದಿಂದ ಮರಗಾಲು ಕುಣಿತ, ಕುಷ್ಟಗಿಯ ದೇವಪ್ಪ ಭಜಂತ್ರಿ ತಂಡದಿಂದ ಹಲಗೆ ಮೇಳ, ದೊಡ್ಡಬಸವೇಶ್ವರ ಖಣಿಮೇಳ ತಂಡದಿಂದ ಖಣಿ ಹಲಗೆ ಮೇಳ, ಆನೆಗೊಂದಿಯ ಜನನಿ ನೃತ್ಯ ತಂಡದಿಂದ ಕಂಸಾಳೆ ನೃತ್ಯ, ಗಂಗಾವತಿಯ ವೀರಣ್ಣ ನಾಗಲೇಕರ ತಂಡದಿಂದ ಸಮಾಳ ವಾದ್ಯ, ಕಿಶನ್ ಹನ್ಮಂತಪ್ಪ ತಂಡದಿಂದ ಬ್ಯಾಂಜಿಯೋ ಮೇಳ, ಬಿನ್ನಾಳದ ಮಾರುತಿ ಶಹನಾಯಿ ಹಲಗೇ ಮೇಳದಿಂದ ಹಲಗೆ ಮೇಳ, ಗಂಗಾವತಿಯ ವೀರಯ್ಯ ಸಂಶೀಮಠ ತಂಡದಿಂದ ವೀರಗಾಸೆ, ಗೊರ್ಲೆಕೊಪ್ಪದ ಶರಣಯ್ಯ ಜುಲ್ಪಿ ತಂಡದಿಂದ ಕರಡಿ ಮಜಲು, ಗಂಗಾವತಿಯ ಅನ್ನಪೂರ್ಣ ಸಿಂಗ್, ಗೀತಾ, ಸಂತೋಷಿ ಭಾಟಿಯಾ ತಂಡದಿಂದ ದಾಂಡಿಯಾ ನೃತ್ಯ, ಕೊನ್ನಾಪುರದ ಪದ್ಮಾವತಿ ಭಜನಾ ಮಂಡಳಿಯಿಂದ ಕೋಲಾಟ, ಕೇಸರಹಟ್ಟಿಯ ಸಿ. ಮಹಾಲಕ್ಷ್ಮಿ ಕಲಾತಂಡದಿಂದ ಲಂಬಾಣಿ ನೃತ್ಯ, ಗಂಗಾವತಿಯ ನ್ಯೂ ಆರ್. ಮ್ಯೂಜಿಕಲ್ ಸ್ಟೆಪ್ ತಂಡದಿಂದ ತಾಷಿಯರಂಡೋಲ್ ವಾದನ, ಕಲ್ಲಾಪುರದ ಹನುಮಂತ ಎತ್ತಿನ ಮನಿ ತಂಡದಿಂದ ಡೊಳ್ಳು ಕುಣಿತ, ಬೆಳಗಲಿಯ ಲಕ್ಕಪ್ಪ ಭಜಂತ್ರಿ ತಂಡದಿಂದ ಹಲಗೆ ವಾದನ, ಬಾಗಲಕೋಟೆಯ ಸದಪ್ಪ ಮೇತ್ರಿ ಅವರಿಂದ ಮೀನಿನ ಸೋಗು, ಜಮಖಂಡಿಯ ರುಕ್ಮವ್ವ ಅವರಿಂದ ಚೌಡಕಿ ಪದ, ಶಿರೂರಿನ ಸಿದ್ದಪ್ಪ ಅವರಿಂದ ಕೊಂಬು ಕಹಳೆ, ಕಟಗೇರಿಯ ರಾಮಾರೂಢ ಭಜನೆ ಮಂಡಳಿಯಿಂದ ಭಜನೆ ಹಾಗೂ ಕೊಪ್ಪಳದ ಬಸವರಾಜ ವಿಭೂತಿ, ಗಂಗಾವತಿಯ ಕಲ್ಯಾಣಂ ನಾಗರಾಜ, ತಾವರಗೇರಾದ ದುರ್ಗಾದೇವಿ ಬುಡಗ ಜಂಗಮ ಕಲಾ ಸಂಘ, ಸಿದ್ದಾಪುರದ ಸಣ್ಣ ಚಿನ್ನಪ್ಪ ವಿಭೂತಿ, ನಟರಾಜ ಕಲಾ ಸಂಘ, ಮಾರುತಿ ವಿಭೂತಿ ತಂಡಗಳಿಂದ ಹಗಲುವೇಷ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿ

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರ ಜಾತ್ರೆಗೆ ಗಂಗಾವತಿ ಸಜ್ಜು


ಕೊಪ್ಪಳ ಡಿ. ೪  : ಇದೇ ಡಿ. ೯ ರಿಂದ ಗಂಗಾವತಿಯಲ್ಲಿ ಪ್ರಾರಂಭವಾಗಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಇಡೀ ಗಂಗಾವತಿ ನಗರ ನವ ವಧುವಿನಿಂತೆ ಶೃಂಗಾರಗೊಳ್ಳುತ್ತಿದ್ದು, ಕನ್ನಡ ತೇರು ಎಳೆಯಲು ಕನ್ನಡ ಮನಸ್ಸುಗಳು, ಕನ್ನಡ ಪ್ರೇಮಿಗಳು, ಸಾಹಿತ್ಯ ಪ್ರೇಮಿಗಳು ತುದಿಗಾಲ ಮೇಲೆ ನಿಂತಿದ್ದಾರೆ.
  ಬಳ್ಳಾರಿ ಉಪಚುನಾವಣೆ ಫಲಿತಾಂಶ ಘೋಷಣೆ ನಂತರ, ಇಡೀ ರಾಜ್ಯದ ಜನತೆಯ ಗಮನ ಇದೀಗ ಗಂಗಾವತಿಯ ಕಡೆಗೆ ತಿರುಗಿದ್ದು,  ಇಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ರಾಜ್ಯದ ಜನತೆಯಲ್ಲಿ ಕುತೂಹಲ ಗರಿಗೆದರಿದೆ.  ಗಂಗಾವತಿ ನಗರದ ಜನತೆ ಅತಿಥಿಗಳ ಸತ್ಕಾರಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದು, ಅತಿಥಿಗಳ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.  ಈಗಾಗಲೆ ನಗರದ ಅನೇಕ ಕನ್ನಡ ಪ್ರೇಮಿಗಳು ಮನೆ ಮನೆ ಅತಿಥಿಗಾಗಿ ತಮ್ಮ ಮನಪೂರ್ವಕ ಒಪ್ಪಿಗೆ ನೀಡಿದ್ದಾರೆ.  ಅನೇಕ ಮಹಿಳಾ ಸಂಘಟನೆಗಳೂ ಸಹ ತಾವೇನು ಕಡಿಮೆ ಇಲ್ಲವೆಂಬಂತೆ, ಇಡೀ ನಗರವನ್ನು ರಂಗೋಲಿಯಿಂದ ಅಲಂಕರಿಸಲು ಸಕಲ ಸಿದ್ಧತೆಯನ್ನು ಕೈಗೊಂಡಿದ್ದು, ರಂಗೋಲಿ ಕಾರ್ಯಕ್ರಮಕ್ಕೆ ಡಿ. ೫ ರಿಂದಲೇ ಚಾಲನೆ ನೀಡಲಿದ್ದಾರೆ.  ನಗರದ ಎಲ್ಲಾ ಮನೆಗಳು, ಅಂಗಡಿಗಳು, ಬೃಹತ್ ಕಟ್ಟಡಗಳು, ಮಳಿಗೆಗಳ ಮುಂದೆ ರಂಗು ರಂಗಿನ ರಂಗೋಲಿ ಬಿಡಿಸಿ, ನಗರ ಸೌಂದರ್ಯೀಕರಣಕ್ಕೆ ಉತ್ಸುಕರಾಗಿದ್ದಾರೆ.  ವಿವಿಧ ಯುವ ಸಂಘಟನೆಗಳು ನಗರದಾದ್ಯಂತ ಬೈಕ್ ರ್‍ಯಾಲಿ ನಡೆಸಿ ಸಾರ್ವಜನಿಕರಲ್ಲಿ ಸಮ್ಮೇಳನ ಕುರಿತಂತೆ ಇನ್ನಷ್ಟು ಕುತೂಹಲ ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ.  ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿಯಲ್ಲಿಯೇ ಬಹುತೇಕ ಯೋಜನೆಗಳು ರೂಪುಗೊಳ್ಳುತ್ತಿದ್ದು, ಪ್ರತಿದಿನ ಕಚೇರಿ ಸಾಹಿತ್ಯ ಪ್ರೇಮಿಗಳಿಂದ ಗಿಜಗುಡುತ್ತಿದೆ.  ಸಮ್ಮೇಳನದ ಯಶಸ್ವಿಗೆ ಯಾವ್ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುವ ಬಗ್ಗೆ ಪ್ರತಿನಿತ್ಯ ಹಲವಾರು ಸಭೆಗಳು ನಡೆಯುತ್ತಿದ್ದು, ಇನ್ನೇನು ಸಭೆಗಳನ್ನು ನಡೆಸುವ ಸಮಯ ಬಹುತೇಕ ಅಂತ್ಯಗೊಂಡಿದ್ದು, ಇನ್ನೇನಿದ್ದರೂ ನೇರವಾಗಿ ವೇದಿಕೆಯ ಕಣದಲ್ಲಿಯೇ ಯೋಜನೆಗಳ ಜಾರಿಗೆ ಎಲ್ಲಾ ಸಮಿತಿಯವರು ಸಜ್ಜಾಗುತ್ತಿದ್ದಾರೆ.
  ಸಮ್ಮೇಳನದ ಯಶಸ್ವಿಗಾಗಿ ರಚಿಸಲಾಗಿರುವ ಸುಮಾರು ೩೪ ಉಪಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ನೆರವೇರಿಸುತ್ತಿದ್ದು, ಸಮಿತಿಗಳ ಪದಾಧಿಕಾರಿಗಳು ಹಗಲಿರುಳೆನ್ನದೆ ಶ್ರಮಿಸುತ್ತಾ, ಎಲ್ಲರೂ ಸಮ್ಮೇಳನದ ಯಶಸ್ವಿಯ ಮಂತ್ರ ಜಪಿಸುತ್ತಿದ್ದಾರೆ.  ಅಕ್ಷರ ಜಾತ್ರೆಯ ಯಶಸ್ವಿಯ ಕೈಂಕರ್ಯಕ್ಕೆ ಜಿಲ್ಲೆಯ ಎಲ್ಲ ಶಿಕ್ಷಕರು ಕೈಜೋಡಿಸಿದ್ದು, ಸಾಹಿತ್ಯ ಪ್ರೇಮಿಗಳಲ್ಲಿ ಸಂತಸವನ್ನು ತಂದಿದೆ.  ಚುನಾಯಿತ ಪ್ರತಿನಿಧಿಗಳು ಆ ಪಕ್ಷ, ಈ ಪಕ್ಷ ಎಂಬ ಭೇದ, ಭಾವ ಮರೆತು ಎಲ್ಲರೂ ಸಮ್ಮೇಳನದ ಯಶಸ್ವಿಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.  
  ಸಮ್ಮೇಳನ ಕೈಂಕರ್ಯವನ್ನು ಸವಾಲಾಗಿ ಸ್ವೀಕರಿಸಿ, ಹಗಲಿರುಳು ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಪದಾಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಶ್ಲಾಘನಾರ್ಹವಾಗಿದ್ದು, ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರಂತೂ ಹಗಲಿರುಳು ಸಮ್ಮೇಳನ, ಸಮ್ಮೇಳನ ಎಂದು ಕನವರಿಸುತ್ತಿದ್ದಾರೇನೋ? ಎನಿಸುತ್ತಿದೆ.  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರ ಮಾರ್ಗದರ್ಶನ, ಪ್ರಾಮಾಣಿಕ ಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  ಇನ್ನು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಂತೂ ಶತಾಯ ಗತಾಯ ಸಮ್ಮೇಳನವನ್ನು ಯಶಸ್ವಿಗೊಳಿಸಿಯೇ ಸಿದ್ಧ ಎನ್ನುವಂತೆ ಸಮ್ಮೇಳನ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  ಸಂಸದ ಶಿವರಾಮಗೌಡ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭಾ ಅಧಿವೇಶನದ ನಡುವೆಯೂ ಬಿಡುವು ಮಾಡಿಕೊಂಡು, ನಗರದಲ್ಲಿ ನಡೆದ ಸಮ್ಮೇಳನದ ಕಾರ್ಯ ಚಟುವಟಿಕೆಯಲ್ಲಿ ಚುರುಕಿನಿಂದ ಭಾಗವಹಿಸಿದ್ದಾರೆ.  ಅದೇ ರೀತಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಮ್ಮೇಳನವನ್ನು ಯಶಸ್ವಿಗೊಳಿಸುವ ದಿಸೆಯಲ್ಲಿ ಸಕ್ರಿಯರಾಗಿರುವುದು ಶ್ಲಾಘನಾರ್ಹ.
  ಒಟ್ಟಾರೆ ಗಂಗಾವತಿಯಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸನ್ನು ಕಂಡು, ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸಿ ಕನ್ನಡ ತಾಯಿ ಭುವನೇಶ್ವರಿಯ ಕೃಪೆಗೆ ಪಾತ್ರರಾಗಲಿ.ಇಡೀ ರಾಜ್ಯದ ಕನ್ನಡ ಪ್ರೇಮಿಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿ ಎನ್ನುವುದು ಎಲ್ಲರ ಆಶಯವಾಗಿದೆ.  

Saturday, December 3, 2011

ಅಕ್ಷರಜಾತ್ರೆಗೆ ಬಲರಾಮ-ಅಭಿಮನ್ಯು !


ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಡಿ. 9ರಿಂದ ಮೂರು ದಿನಗಳ ಕಾಲ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರಿನಿಂದ `ಬಲರಾಮ` ಮತ್ತು `ಅಭಿಮನ್ಯು` ಆಗಮಿಸುವ ಸಾಧ್ಯತೆಯಿದೆ.


 ಡಿ. 9ರಂದು ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆಯಲಿರುವ ಮೆರವಣಿಗೆಗೆ ಈ `ವಿಶೇಷ ಅತಿಥಿ`ಗಳನ್ನು ಕಳುಹಿಸುವಂತೆ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕೋರಿದೆ.

ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿ ಅಂಬಾರಿಯನ್ನು ಹೊರುವ `ಬಲರಾಮ` ಆನೆಯನ್ನು ಕನ್ನಡ ಜಾತ್ರೆಗೆ ಇದೇ ಮೊದಲ ಸಲ ಕರೆತರಲು ನಿರ್ಧರಿಸಿರುವ ಸಮಿತಿ, ಈ ಸಂಬಂಧ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರಿಗೆ ಪತ್ರ ಬರೆದು ಮನವಿ ಮಾಡಿದೆ. 
ಆದರೆ, ಮೈಸೂರಿನಿಂದ ಗಂಗಾವತಿವರೆಗೆ ದೀರ್ಘ ಪ್ರಯಾಣ ಇರುವುದರಿಂದ ಕೇವಲ `ಬಲರಾಮ` ಆನೆಯನ್ನು ಕಳಿಸುವುದು ಸರಿಯಲ್ಲ. ಈ ಆನೆ ಜೊತೆಗೆ `ಅಭಿಮನ್ಯು`ವನ್ನೂ ಕಳಿಸಬೇಕು ಎಂಬುದಾಗಿ ಹುಣಸೂರಿನಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯ ಜೀವಿ ವಿಭಾಗ) ಕಚೇರಿಯ ಪಶುವೈದ್ಯಾಧಿಕಾರಿ ಹಾಗೂ ಆನೆಗಳ ಮೇಲ್ವಿಚಾರಕರು ಸಲಹೆ ನೀಡಿದ್ದಾರೆ. 

ಈ ಸಲಹೆಯಂತೆ ಪ್ರಸಕ್ತ ಇವೆರಡು ಆನೆಗಳ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ವರದಿಯನ್ನು ಕೇಳಲಾಗಿದೆ. ಈ ವರದಿ ಡಿ. 5ರಂದು ಬರುವ ನಿರೀಕ್ಷೆ ಇದೆ. ಈ ಎರಡು ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಅಂದೇ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಇದೇ ಕಚೇರಿ ಮೂಲಗಳು ಹೇಳಿವೆ.

ಭದ್ರತಾ ವ್ಯವಸ್ಥೆ: ಸಮ್ಮೇಳನದ ಮೆರವಣಿಗೆಯ ಸಂದರ್ಭದಲ್ಲಿ ಆನೆಗಳು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಕೋರಿದ್ದಾರೆ.
  
ಮೆರವಣಿಗೆಯಲ್ಲಿ 30 ಸ್ತಬ್ಧಚಿತ್ರಗಳು, 30 ಕಲಾ ತಂಡಗಳು ಪಾಲ್ಗೊಳ್ಳುವುದರಿಂದ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. 

ಮೆರವಣಿಗೆ ವೀಕ್ಷಿಸುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಆನೆಗಳನ್ನು ಕರೆತಂದು ನಂತರ ಮೂಲ ಸ್ಥಾನಕ್ಕೆ ಕಳುಹಿಸುವ ವರೆಗೆ ಸಂಪೂರ್ಣ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಳ್ಳುವಂತೆಯೂ ಅವರು ಸೂಚಿಸಿದ್ದಾರೆ -ಪ್ರಜಾವಾಣಿ

ಸಾಹಿತ್ಯಕ್ತರಿಗೆ ಜಿಲ್ಲಾ ದರ್ಶನ



ಗಂಗಾವತಿ: ನಗರದಲ್ಲಿ ನಡೆಯುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಕ್ತರಿಗೆ ಕೇವಲ ಸಾಹಿತ್ಯದ ರಸದೌತಣ ಉಣಬಡಿಸುವುದು ಮಾತ್ರವಲ್ಲ,  ಜಿಲ್ಲೆಯ ಸಾಂಸ್ಕೃತಿಕ, ಸ್ಮಾರಕ ಪರಂಪರೆಯನ್ನು ಬಿಂಬಿಸುವ `ಜಿಲ್ಲಾ ದರ್ಶನ` ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ದರ್ಶನ ಯೋಜನೆಯಡಿ ಕೊಪ್ಪಳ ಸೇರಿದಂತೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿರುವ ಐತಿಹಾಸಿಕ ಸ್ಮಾರಕ, ಯಾತ್ರಾ ಸ್ಥಳಗಳನ್ನು ಸಾಹಿತ್ಯಾಸಕ್ತರಿಗೆ ಸಾರಿಗೆ ವಾಹನದಲ್ಲಿ ಕರೆದೊಯ್ದು ಪರಿಚಯಿಸುವ  ಉದ್ದೇಶ ಜಿಲ್ಲಾ ದರ್ಶನ ಸಮಿತಿ ಹೊಂದಿದೆ. 

ನೆರೆಹೊರೆ ಜಿಲ್ಲೆ ಮತ್ತು ರಾಜ್ಯದ ಗಮನ ಸೆಳೆದ ಜಿಲ್ಲೆಯ ವಿವಿಧ ತಾಲ್ಲೂಕಿನ ಸ್ಥಳಗಳಾದ  ಗವಿಮಠ, ಇಟಗಿ ಮಹಾದೇವ ಮಂದಿರ, ಕುಷ್ಟಗಿಯ ಪುರ, ಕನಕಗಿರಿಯ ಕನಕಾಚಲ ಪತಿ ಮಂದಿರ ಮೊದಲಾದ ಸ್ಥಳಗಳನ್ನು ಆಸಕ್ತರಿಗೆ ತೋರಿಸುವ ಯೋಜನೆ ರೂಪಿಸಲಾಗಿದೆ. 

ಇನ್ನು ವಿಜಯನಗರದ ಮೂಲ ರಾಜಧಾನಿ, ರಾಮಾಯಣದಂತಹ ಪುರಾಣ ಕಥಾನಕದೊಂದಿಗೆ ಥಳಕು ಹಾಕಿಕೊಂಡಿರುವ ಆನೆಗೊಂದಿ ಸುತ್ತಲಿನ ಹತ್ತಾರು ಪ್ರಾಚೀನ ಐತಿಹಾಸಿಕ ಹಿನ್ನೆಲೆಯುಳ್ಳ ಯಾತ್ರಾ ಸ್ಥಳ, ಸ್ಮಾರಕಗಳನ್ನು  ವೀಕ್ಷಿಸುವ ಭಾಗ್ಯ ಸಾಹಿತ್ಯಾಸಕ್ತರಿಗೆ ದೊರೆಯಲಿದೆ. 

ಈಗಾಗಲೆ ಜಿಲ್ಲಾ ದರ್ಶನ ಸಮಿತಿಯು ಜಿಲ್ಲೆಯಲ್ಲಿರುವ ಆಯಾ ಪ್ರಸಿದ್ದ ಸ್ಮಾರಕ, ಸ್ಥಳಗಳ ಮಾಹಿತಿ ನೀಡುವ ಉದ್ದೇಶಕ್ಕೆ ಸಂಶೋಧಕ ಹಾಗೂ ಇತಿಹಾಸಕಾರ ಡಾ, ಶರಣಬಸಪ್ಪ ಕೋಲ್ಕಾರ ನೇತೃತ್ವದಲ್ಲಿ ಒಂದು ಕಿರುಹೊತ್ತಿಗೆ ತರುತ್ತಿದೆ.

ಅದರಲ್ಲಿ ಸ್ಮಾರಕ, ಯಾತ್ರಾ ಸ್ಥಳದ ಮಾಹಿತಿ, ಹಿನ್ನೆಲೆ, ಸಮ್ಮೇಳನದ ನಡೆಯುವ ಕೇಂದ್ರ ಸ್ಥಳವಾದ ನಗರದಿಂದ ಎಷ್ಟು ದೂರವಾಗಲಿದೆ. ಅಲ್ಲಿಗೆ ತೆರಳಲು ಇರುವ ಸಾರಿಗೆ ಸಂಪರ್ಕ, ಸೌಲಭ್ಯ ಮೊದಲಾದ ಮಾಹಿತಿ ಒಳಗೊಂಡ ಸಂಚಿಕೆ ಸಿದ್ದವಾಗುತ್ತದೆ.

ಅಲ್ಲದೇ ಆಸಕ್ತ ಪ್ರವಾಸಿಗರಿಗೆ ಹೆಚ್ಚುವರಿ ಮಾಹಿತಿ ನೀಡಲು ಸಮ್ಮೇಳನದಲ್ಲಿ ಎರಡು ಪ್ರತ್ಯೇಕ ಕೌಂಟರ್ ತೆಗೆದು ಮಾಹಿತಿ ನೀಡುವ ಉದ್ದೇಶ ಸಂಘಟಕರಿಗಿದೆ

Friday, December 2, 2011

ಸಾಹಿತ್ಯ ಸಮ್ಮೇಳನ ಪೂರ್ವ ಭಾವಿ ಸಭೆ





 ೭೮ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವ ಭಾವಿ ಸಭೆ ಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಗಂಗಾವತಿಯಲ್ಲಿ ನಡೆಸಿದರು. ೭೮ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ದತೆ ಕುರಿತು ಗಂಗಾವತಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಪರಿಶೀಲಿಸಿದರು.ಶಾಸಕರುಗಳಾದ ಪರಣ್ಣ ಮುನವಳ್ಳಿ, ಕರಡಿ ಸಂಗಣ್ಣ , ಹಾಲಪ್ಪ ಆಚಾರ್, ಲಲಿತಾ ರಾಣಿ ಶ್ರೀರಂಗದೇವರಾಯಲು, ಜಿಲ್ಲಾಧಿಕಾರಿ ತುಳಸಿ ಮದ್ದಿನೆನಿ ಮುಂತಾದವರಿದ್ದರು


Thursday, December 1, 2011

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಡಿ. ೨ ರಂದು ಪೂರ್ವಭಾವಿ ಸಭೆ


ಕೊಪ್ಪಳ ಡಿ. : ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಡಿ. ೯ ರಿಂದ ೧೧ ರವರೆಗೆ ಮೂರು ದಿನಗಳ ಕಾಲ ಗಂಗಾವತಿಯಲ್ಲಿ ಜರುಗಲಿದ್ದು, ಸಮ್ಮೇಳನದ ಸಿದ್ಧತೆ ಕುರಿತಂತೆ ಪರಾಮರ್ಶಿಸಲು ಪೂರ್ವಭಾವಿ ಸಭೆ ಡಿ. ೦೨ ರಂದು ಬೆಳಿಗ್ಗೆ ೧೧ ಗಂಟೆಗೆ ಗಂಗಾವತಿ ತಹಸಿಲ್ದಾರರ ಕಚೇರಿಯಲ್ಲಿ ನಡೆಯಲಿದೆ.
  ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ವಹಿಸುವರು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.