ಕೊಪ್ಪಳ ಡಿ. ೪ : ಇದೇ ಡಿ. ೯ ರಿಂದ ಗಂಗಾವತಿಯಲ್ಲಿ ಪ್ರಾರಂಭವಾಗಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಇಡೀ ಗಂಗಾವತಿ ನಗರ ನವ ವಧುವಿನಿಂತೆ ಶೃಂಗಾರಗೊಳ್ಳುತ್ತಿದ್ದು, ಕನ್ನಡ ತೇರು ಎಳೆಯಲು ಕನ್ನಡ ಮನಸ್ಸುಗಳು, ಕನ್ನಡ ಪ್ರೇಮಿಗಳು, ಸಾಹಿತ್ಯ ಪ್ರೇಮಿಗಳು ತುದಿಗಾಲ ಮೇಲೆ ನಿಂತಿದ್ದಾರೆ.
ಬಳ್ಳಾರಿ ಉಪಚುನಾವಣೆ ಫಲಿತಾಂಶ ಘೋಷಣೆ ನಂತರ, ಇಡೀ ರಾಜ್ಯದ ಜನತೆಯ ಗಮನ ಇದೀಗ ಗಂಗಾವತಿಯ ಕಡೆಗೆ ತಿರುಗಿದ್ದು, ಇಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ರಾಜ್ಯದ ಜನತೆಯಲ್ಲಿ ಕುತೂಹಲ ಗರಿಗೆದರಿದೆ. ಗಂಗಾವತಿ ನಗರದ ಜನತೆ ಅತಿಥಿಗಳ ಸತ್ಕಾರಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದು, ಅತಿಥಿಗಳ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ. ಈಗಾಗಲೆ ನಗರದ ಅನೇಕ ಕನ್ನಡ ಪ್ರೇಮಿಗಳು ಮನೆ ಮನೆ ಅತಿಥಿಗಾಗಿ ತಮ್ಮ ಮನಪೂರ್ವಕ ಒಪ್ಪಿಗೆ ನೀಡಿದ್ದಾರೆ. ಅನೇಕ ಮಹಿಳಾ ಸಂಘಟನೆಗಳೂ ಸಹ ತಾವೇನು ಕಡಿಮೆ ಇಲ್ಲವೆಂಬಂತೆ, ಇಡೀ ನಗರವನ್ನು ರಂಗೋಲಿಯಿಂದ ಅಲಂಕರಿಸಲು ಸಕಲ ಸಿದ್ಧತೆಯನ್ನು ಕೈಗೊಂಡಿದ್ದು, ರಂಗೋಲಿ ಕಾರ್ಯಕ್ರಮಕ್ಕೆ ಡಿ. ೫ ರಿಂದಲೇ ಚಾಲನೆ ನೀಡಲಿದ್ದಾರೆ. ನಗರದ ಎಲ್ಲಾ ಮನೆಗಳು, ಅಂಗಡಿಗಳು, ಬೃಹತ್ ಕಟ್ಟಡಗಳು, ಮಳಿಗೆಗಳ ಮುಂದೆ ರಂಗು ರಂಗಿನ ರಂಗೋಲಿ ಬಿಡಿಸಿ, ನಗರ ಸೌಂದರ್ಯೀಕರಣಕ್ಕೆ ಉತ್ಸುಕರಾಗಿದ್ದಾರೆ. ವಿವಿಧ ಯುವ ಸಂಘಟನೆಗಳು ನಗರದಾದ್ಯಂತ ಬೈಕ್ ರ್‍ಯಾಲಿ ನಡೆಸಿ ಸಾರ್ವಜನಿಕರಲ್ಲಿ ಸಮ್ಮೇಳನ ಕುರಿತಂತೆ ಇನ್ನಷ್ಟು ಕುತೂಹಲ ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿಯಲ್ಲಿಯೇ ಬಹುತೇಕ ಯೋಜನೆಗಳು ರೂಪುಗೊಳ್ಳುತ್ತಿದ್ದು, ಪ್ರತಿದಿನ ಕಚೇರಿ ಸಾಹಿತ್ಯ ಪ್ರೇಮಿಗಳಿಂದ ಗಿಜಗುಡುತ್ತಿದೆ. ಸಮ್ಮೇಳನದ ಯಶಸ್ವಿಗೆ ಯಾವ್ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುವ ಬಗ್ಗೆ ಪ್ರತಿನಿತ್ಯ ಹಲವಾರು ಸಭೆಗಳು ನಡೆಯುತ್ತಿದ್ದು, ಇನ್ನೇನು ಸಭೆಗಳನ್ನು ನಡೆಸುವ ಸಮಯ ಬಹುತೇಕ ಅಂತ್ಯಗೊಂಡಿದ್ದು, ಇನ್ನೇನಿದ್ದರೂ ನೇರವಾಗಿ ವೇದಿಕೆಯ ಕಣದಲ್ಲಿಯೇ ಯೋಜನೆಗಳ ಜಾರಿಗೆ ಎಲ್ಲಾ ಸಮಿತಿಯವರು ಸಜ್ಜಾಗುತ್ತಿದ್ದಾರೆ.
ಸಮ್ಮೇಳನದ ಯಶಸ್ವಿಗಾಗಿ ರಚಿಸಲಾಗಿರುವ ಸುಮಾರು ೩೪ ಉಪಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ನೆರವೇರಿಸುತ್ತಿದ್ದು, ಸಮಿತಿಗಳ ಪದಾಧಿಕಾರಿಗಳು ಹಗಲಿರುಳೆನ್ನದೆ ಶ್ರಮಿಸುತ್ತಾ, ಎಲ್ಲರೂ ಸಮ್ಮೇಳನದ ಯಶಸ್ವಿಯ ಮಂತ್ರ ಜಪಿಸುತ್ತಿದ್ದಾರೆ. ಅಕ್ಷರ ಜಾತ್ರೆಯ ಯಶಸ್ವಿಯ ಕೈಂಕರ್ಯಕ್ಕೆ ಜಿಲ್ಲೆಯ ಎಲ್ಲ ಶಿಕ್ಷಕರು ಕೈಜೋಡಿಸಿದ್ದು, ಸಾಹಿತ್ಯ ಪ್ರೇಮಿಗಳಲ್ಲಿ ಸಂತಸವನ್ನು ತಂದಿದೆ. ಚುನಾಯಿತ ಪ್ರತಿನಿಧಿಗಳು ಆ ಪಕ್ಷ, ಈ ಪಕ್ಷ ಎಂಬ ಭೇದ, ಭಾವ ಮರೆತು ಎಲ್ಲರೂ ಸಮ್ಮೇಳನದ ಯಶಸ್ವಿಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.
ಸಮ್ಮೇಳನ ಕೈಂಕರ್ಯವನ್ನು ಸವಾಲಾಗಿ ಸ್ವೀಕರಿಸಿ, ಹಗಲಿರುಳು ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಪದಾಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಶ್ಲಾಘನಾರ್ಹವಾಗಿದ್ದು, ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರಂತೂ ಹಗಲಿರುಳು ಸಮ್ಮೇಳನ, ಸಮ್ಮೇಳನ ಎಂದು ಕನವರಿಸುತ್ತಿದ್ದಾರೇನೋ? ಎನಿಸುತ್ತಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರ ಮಾರ್ಗದರ್ಶನ, ಪ್ರಾಮಾಣಿಕ ಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಂತೂ ಶತಾಯ ಗತಾಯ ಸಮ್ಮೇಳನವನ್ನು ಯಶಸ್ವಿಗೊಳಿಸಿಯೇ ಸಿದ್ಧ ಎನ್ನುವಂತೆ ಸಮ್ಮೇಳನ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಸದ ಶಿವರಾಮಗೌಡ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭಾ ಅಧಿವೇಶನದ ನಡುವೆಯೂ ಬಿಡುವು ಮಾಡಿಕೊಂಡು, ನಗರದಲ್ಲಿ ನಡೆದ ಸಮ್ಮೇಳನದ ಕಾರ್ಯ ಚಟುವಟಿಕೆಯಲ್ಲಿ ಚುರುಕಿನಿಂದ ಭಾಗವಹಿಸಿದ್ದಾರೆ. ಅದೇ ರೀತಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಮ್ಮೇಳನವನ್ನು ಯಶಸ್ವಿಗೊಳಿಸುವ ದಿಸೆಯಲ್ಲಿ ಸಕ್ರಿಯರಾಗಿರುವುದು ಶ್ಲಾಘನಾರ್ಹ.
ಒಟ್ಟಾರೆ ಗಂಗಾವತಿಯಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸನ್ನು ಕಂಡು, ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸಿ ಕನ್ನಡ ತಾಯಿ ಭುವನೇಶ್ವರಿಯ ಕೃಪೆಗೆ ಪಾತ್ರರಾಗಲಿ.ಇಡೀ ರಾಜ್ಯದ ಕನ್ನಡ ಪ್ರೇಮಿಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿ ಎನ್ನುವುದು ಎಲ್ಲರ ಆಶಯವಾಗಿದೆ.
No comments:
Post a Comment